ಜೈಪುರ: ಮಹಾರಾಷ್ಟ್ರದಿಂದ ಐ ಪಿ ಎಲ್ ಪಂದ್ಯಗಳನ್ನು ಎತ್ತಂಗಡಿ ಮಾಡಿಸಿದ ಬಾಂಬೆ ಹೈಕೋರ್ಟ್ ತೀರ್ಪಿನ ಹಿನ್ನಲೆಯಲ್ಲೇ, ನೀರು ಪೋಲಾಗುತ್ತಿದೆ ಎಂದು ರಾಜಸ್ಥಾನದಲ್ಲೂ ಐಪಿಎಲ್ ಪಂದ್ಯಗಳನ್ನು ನಿಷೇಧಿಸಬೇಕು ಎಂದು ಕೋರಿರುವ ಸಾರ್ವಜನಿಕ ಅರ್ಜಿಯನ್ನು ವಿಚಾರಣೆ ಮಾಡಿದ ರಾಜಸ್ಥಾನ ಹೈಕೋರ್ಟ್ ಇದಕ್ಕೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೋರಿದೆ.
ಬೇಸಿಗೆಯಲ್ಲಿ ರಾಜಸ್ಥಾನ ತೀವ್ರ ನೀರಿನ ತೊಂದರೆಯನ್ನು ಎದುರಿಸುವುದನ್ನು ಗಮನಿಸಿರುವ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಮತ್ತು ಡಿ ಸಿ ಸೋಮಾನಿ ಇವರುಗಳನ್ನು ಒಳಗೊಂಡ ವಿಭಾಗೀಯ ಪೀಠ ಏಪ್ರಿಲ್ ೩೦ ರೊಳಗೆ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮುಂದಿನ ಎರಡು ತಿಂಗಳೊಳಗೆ ಸಾರ್ವಜನಿಕರಿಗೆ ನೀರನ್ನು ಒದಗಿಸುವ ಯೋಜನೆ ಮತ್ತು ನೀತಿ ಸರ್ಕಾರ ರೂಪಿಸಿದೆಯೆ ಎಂದು ಕೂಡ ಸರ್ಕಾರವನ್ನು ಪ್ರಶ್ನಿಸಿದೆ.
ಮುಂದಿನ ವಿಚಾರಣೆಯನ್ನು ಕೋರ್ಟ್ ಮೇ ೩ಕ್ಕೆ ಮುಂದೂಡಿದೆ.
ಪ್ರತಿ ಪಂದ್ಯಕ್ಕೆ ೮೦ ಲಕ್ಷ ಲೀಟರ್ ನೀರು ಪೋಲಾಗುತ್ತಿದೆ ಹಾಗೂ ಬೇಸಿಗೆಯಲ್ಲಿ ಜೈಪುರ ನಗರದಲ್ಲಿ ನೀರಿದ ತೊಂದರೆ ತೀವ್ರವಾಗಲಿದ್ದು ಪಂದ್ಯಗಳನ್ನು ನಿಷೇಧ ಮಾಡುವಂತೆ ಕೋರಿ ಏಪ್ರಿಲ್ ೨೨ ರಂದು ಮಹೇಶ್ ಪರೀಕ್ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತ್ತು.