ಗೀತಾ ಪೋಗಾತ್ -ಬಬಿತಾ ಪೋಗಾತ್
ನವದೆಹಲಿ: ಭಾರತದ ಅಗ್ರ ಶ್ರೇಯಾಂಕಿತ ಮಹಿಳಾ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಪೋಗಾತ್ ಅವರು ರಿಯೋ ಡೆ ಜನೆರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಪಂದ್ಯಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಮಂಗೋಲಿಯಾದ ಉಲಾನ್‌ಬಟೋರ್ ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಈ ಸಹೋದರಿಯರು ಶಿಸ್ತು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಯುನೈಟೆಡ್ ವರ್ಲ್ಡ್ ವ್ರೆಸ್ಟ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಹೇಳಿದೆ.
ಇಬ್ಬರು ಸಹೋದರಿಯರು ಅರ್ಹತಾ ಪಂದ್ಯದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಇಬ್ಬರಿಗೂ ಗಾಯವಾಗಿರುವ ವಿಷಯವನ್ನು ಟೀಂನ ಕೋಚ್ ಯುಡಬ್ಲ್ಯುಡಬ್ಲ್ಯುಗೆ ತಿಳಿಸಿರಲಿಲ್ಲ. ಗಾಯವಾಗಿರುವ ವಿಷಯವನ್ನು ಪ್ರಸ್ತುತ ಮಂಡಳಿಗೆ ತಿಳಿಸದೇ ಇರುವ ಕಾರಣ ಇಬ್ಬರೂ ಸಹೋದರಿಯರಿಗೆ ಜೀವಾವಧಿ ನಿಷೇಧ ಹೇರುವ ಸಾಧ್ಯತೆಯಿದೆ.
ಆ ಬಗ್ಗೆ ಮೇ 15ರೊಳಗೆ ಸ್ಪಷ್ಟೀಕರಣ ನೀಡಬೇಕೆಂದು ಭಾರತದ ಕುಸ್ತಿಪಟುಗಳ ಸಂಸ್ಥೆಯ ಶಿಸ್ತು ಸಮಿತಿ ಸದಸ್ಯರು ಪೋಗಾತ್ ಸಹೋದರಿಯರಿಗೆ ನೋಟಿಸ್ ಕಳುಹಿಸಿದ್ದಾರೆ. ಈ ನೋಟಿಸ್‌ಗೆ ಸರಿಯಾಗಿ ಉತ್ತರಿಸದೇ ಇದ್ದರೆ ಇವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಮಿತಿ ಹೇಳಿದೆ.
ಇದೀಗ 53 ಕೆಜಿ ವಿಭಾಗದಲ್ಲಿ ಬಬಿತಾ ಅವರ ಬದಲಿಗೆ ಲಲಿತಾ ಕುಮಾರಿ ಮತ್ತು 58 ಕೆಜೆ ವಿಭಾಗದಲ್ಲಿ ಸಾಕ್ಷಿ ಮಲಿಕ್ ಅವರು ಗೀತಾ ಅವರ ಬದಲು ಸ್ಪರ್ಧಾ ಕಣಕ್ಕಿಳಿಯಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ದಂಗಾಲ್ ಸಿನಿಮಾವನ್ನು ಇದು ಬಾಧಿಸಲಿದೆಯೆ?
ಹರ್ಯಾಣದ ಮಹಿಳಾ ಕುಸ್ತಿಪಟುಗಳ ಜೀವನವನ್ನಾಧರಿಸಿದ ಸಿನಿಮಾ ಅಮೀರ್ ಖಾನ್ ರ ದಂಗಾಲ್. 2016 ವರ್ಷಾಂತ್ಯದಲ್ಲಿ ಒಲಿಂಪಿಕ್ಸ್ ವೇಳೆ ದಂಗಾಲ್ ಸಿನಿಮಾವನ್ನು ಬಿಡುಗಡೆ ಮಾಡಲು ಅಮೀರ್ ತೀರ್ಮಾನಿಸಿದ್ದರು. ಪೋಗಾತ್ ಸಹೋದರಿಯರು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ವೇಳೆ ದಂಗಾಲ್ ಸಿನಿಮಾ ಬಿಡುಗಡೆಯಾದರೆ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳಬಹುದು ಎಂಬುದು ದಂಗಾಲ್ ಟೀಂನ ಯೋಜನೆಯಾಗಿತ್ತು. ಆದರೆ ಈಗ ಪೋಗಾತ್ ಸಹೋದರಿಯರಿಗೆ ಒಲಿಂಪಿಕ್ಸ್ ಅವಕಾಶ ಕೈ ತಪ್ಪಿರುವುದರಿಂದ ಅದು ದಂಗಾಲ್ ಸಿನಿಮಾವನ್ನು ಬಾಧಿಸಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.