ನವದೆಹಲಿ: ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬೀಳುತ್ತಿರುವ ಭಾರತೀಯ ಅಥ್ಲೀಟ್ ಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಈ ಪಟ್ಟಿಗೆ ಖ್ಯಾತ ರನ್ನರ್ ಧರಮ್ ಬೀರ್ ಸಿಂಗ್ ಹೊಸ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಉದ್ದೀಪನ ತಡೆ ಘಟಕ (ನಾಡಾ) ನಡೆಸಿದ್ದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಧರಮ್ ಬೀರ್ ಸಿಂಗ್ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ರಿಯೋ ಒಲಿಂಪಿಕ್ಸ್ ಗೆ ಅವರ ಆಯ್ಕೆಯನ್ನು ತಡೆ ಹಿಡಿದು ಆದೇಶ ಹೊರಡಿಸುವ ಸಾಧ್ಯತೆ ಇದೆ. 36 ವರ್ಷಗಳ ರಿಯೊ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪರ ರನ್ನಿಂಗ್ ವಿಭಾಗದಲ್ಲಿ ಆಯ್ಕೆಯಾಗಿ ದಾಖಲೆ ಬರೆದಿದ್ದ ಧರಮ್ ಬೀರ್ ಸಿಂಗ್ ಇದೀಗ ಆ ದಾಖಲೆಗೂ ಮುನ್ನವೇ ರಿಯೋ ಒಲಿಂಪಿಕ್ಸ್ ನಿಂದ ಹೊರ ಬೀಳುತ್ತಿದ್ದಾರೆ.
ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ಅವರ ಮೇಲೆ ಕ್ರೀಡಾ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಅವರಿಗೆ ಆಜೀವ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರೋಹ್ಟಕ್ ಮೂಲದ ಓಟಗಾರ ಧರಮ್ ಬೀರ್ ಸಿಂಗ್ ಈ ಹಿಂದೆಯೂ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಬಿದ್ದಿದ್ದರು. ಆಗ ಕೇವಲ ಎಚ್ಚರಿಕೆಯೊಂದಿಗೆ ಪಾರಾಗಿದ್ದ ಅವರು, ಇದೀಗ ಆಜೀವ ನಿಷೇಧದ ಭೀತಿಯಲ್ಲಿದ್ದಾರೆ.
ಇದೇ ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ಅಥ್ಲೆಟಿಕ್ಸ್ ನಲ್ಲಿ 20.45 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ, ಪ್ರಶಸ್ತಿಗಳಿಸುವ ಮೂಲಕ ಧರಮ್ ಬೀರ್ ಸಿಂಗ್ ರಿಯೊ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿದ್ದರು.