ಪಂದ್ಯ ಡ್ರಾದಿಂದ ಅಂತ್ಯಗೊಂಡ ಹಿನ್ನೆಲೆಯಲ್ಲಿ ಭಾರತ ಮಹಿಳಾ ಹಾಕಿ ಆಟಗಾರರ ಸಂಭ್ರಮ
ರಿಯೊ ಡಿ ಜನೈರೊ: ಕೆಲವು ಆಟಗಾರರ ಮೇಲೆ ಭಾರತ ಇಟ್ಟಿದ್ದ ನಿರೀಕ್ಷೆ ಆರಂಭದಲ್ಲಿಯೇ ನಿರಾಸೆಯಾಗಿದೆ. ಒಲಿಂಪಿಕ್ಸ್ ಆರಂಭಿಕ ಪಂದ್ಯದಿಂದಲೇ ಹೊರಬಿದ್ದಿದ್ದಾರೆ.
ಪುರುಷರ ಡಬಲ್ಸ್ ಟೆನಿಸ್ ನಲ್ಲಿ ಲಿಯಾಂಡರ್ ಪೇಸ್-ರೋಹನ್ ಬೋಪಣ್ಣ ಅವರಂತೆ ಸಾನಿಯಾ ಮಿರ್ಜಾ-ಪ್ರಾರ್ಥನಾ ತೋಂಬ್ರೆ ಕೂಡ ಮೊದಲ ಸುತ್ತಿನಲ್ಲೆ ನಿರ್ಗಮಿಸಿದ್ದಾರೆ.
ಮಹಿಳಾ ಡಬಲ್ಸ್ ನಲ್ಲಿ ಚೀನಾದ ಶುಯಿ ಜಾಂಗ್ -ಶುಯಿ ಪೆಂಗ್ ವಿರುದ್ಧ 7-6, 5-7, 7-5 ಸೆಟ್ ಗಳ ಅಂತರದಿಂದ ಸೋತಿತು.
ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ-ಮಹೇಶ್ ಬೋಪಣ್ಣ ಕಣಕ್ಕಿಳಿಯಲಿದ್ದಾರೆ.
ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭರವಸೆಯ ಹೀನಾ ಸಿಧು ಅರ್ಹತಾ ಸುತ್ತಿನಲ್ಲಿ ಸೋತು ಹೊರ ನಡೆದಿದ್ದಾರೆ. 44 ಶೂಟರ್ ಗಳ ಅರ್ಹತಾ ಸ್ಪರ್ಧೆಯಲ್ಲಿ ಹೀನಾ 14ನೇ ಸ್ಥಾನಿಯಾಗಿ ನಿರಾಸೆ ಕಂಡರು.
ಹೀನಾ ಸಿಧು ನಾಳೆ ನಡೆಯಲಿರುವ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಟೇಬಲ್ ಟೆನ್ನಿಸ್ ಹೋರಾಟದಲ್ಲಿ ಮೊದಲ ಸುತ್ತಿನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ಅಚಂತ ಶರತ್ ಕಮಲ್ ರೊಮೇನಿಯಾದ ಆಡ್ರಿಯನ್ ಕ್ರಿಸಾನ್ ವಿರುದ್ಧ 8-11, 12-14, 11-9, 6-11, 8-11 ರಿಂತ ಆಘಾತ ಅನುಭವಿಸಿದರು. ಇನ್ನು ಸೌಮ್ಯಜಿತ್ ಘೋಷ್ ಅವರನ್ನು ಥಾಯ್ಲೆಂಡಿನ ಪದಸಾಕ್ ತನ್ವಿರಿಯ ವಿರುದ್ಧ 11-8, 11-6, 12-14, 11-6, 13-11 ಅಂತರದಿಂದ ಪರಾಭವಗೊಂಡರು. ವೇಟ್ ಲಿಫ್ಟಿಂಗ್ ನಲ್ಲಿ ಭರವಸೆ ಮೂಡಿಸಿದ್ದ ಮಹಿಳಾ ವೇಟ್ ಲಿಫ್ಟರ್ ಸಾಯ್ ಕೋಮ್ ಮೀರಾಬಾಯಿ ಚಾನು ವೈಫಲ್ಯ ಕಂಡಿದ್ದಾರೆ.
ವೀರೋಚಿತ ಸೋಲು: ನಿನ್ನೆ ತಡರಾತ್ರಿ ನಡೆದ ಮಹಿಳಾ ಆರ್ಚರಿ ಪಂದ್ಯದಲ್ಲಿ ರಷ್ಯಾ ವಿರುದ್ಧ ಭಾರತ ವೀರೋಚಿತ ಸೋಲು ಕಂಡಿದೆ.
ಭಾರತ ರಷ್ಯಾದಿಂದ 2 ಅಂಕ ಹಿಂದುಳಿಯುವ ಮೂಲಕ ಸೆಮಿ ಫೈನಲ್ ಪ್ರವೇಶದಿಂದ ವಂಚಿತವಾಗಿದೆ. ಬೊಂಬಾಯ್ಲಾದೇವಿ, ಲಕ್ಷ್ಮೀರಾಣಿ ಮಾಝಿ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತ ತಂಡ, ಹಾಲಿ ಚಾಂಪಿಯನ್ ರಷ್ಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆಯಿತು.
ಮಹಿಳಾ ಹಾಕಿ: 36 ವರ್ಷಗಳ ನಂತರ ಒಲಿಂಪಿಕ್ಸ್ ನಲ್ಲಿ ಆಡುವ ಅರ್ಹತೆ ಗಳಿಸಿದ ಭಾರತೀಯ ಮಹಿಳಾ ಹಾಕಿ ತಂಡ ಬಿ ಬಣದಲ್ಲಿ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ಉತ್ತಮ ಹೋರಾಟಕಾರಿ ಪ್ರದರ್ಶನ ನೀಡಿ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು.
ಇಂದು ನಡೆಯಲಿರುವ ಪಂದ್ಯಗಳಲ್ಲಿ ಪುರುಷರ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ, ಗಗನ್ ನಾರಂಗ್, ಮಹಿಳಾ ಆರ್ಚರಿ ವೈಯಕ್ತಿಕ ವಿಭಾಗದಲ್ಲಿ ಲಕ್ಷ್ಮೀರಾಣಿ ಮಾಝಿ, ಪುರುಷರ ಹಾಕಿಯಲ್ಲಿ ಭಾರತ ಜರ್ಮನಿ ವಿರುದ್ಧ ಸೆಣಸಲಿದೆ. ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ಹೀಟ್ಸ್ ನಲ್ಲಿ ಶಿವಾನಿ ಕಟಾರಿಯಾ, ಪುರುಷರ 200 ಮೀಟರ್ ಬಟರ್ ಫ್ಲೈ ಹೀಟ್ಸ್ ನಲ್ಲಿ ಸಾಜನ್ ಪ್ರಕಾಶ್ ಕಣಕ್ಕಿಳಿಯಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos