ರಿಯೋ ಒಲಿಂಪಿಕ್ಸ್ನಲ್ಲಿ ಮತ್ತೊಂದು ಅವಘಡ: ಡಚ್ ಸೈಕ್ಲಿಸ್ಟ್ ಬಿದ್ದು ಬೆನ್ನುಮೂಳೆ ಮುರಿತ, ಐಸಿಯುಗೆ ದಾಖಲು
ರಿಯೋ ಒಲಿಂಪಿಕ್ಸ್ ಆರಂಭವಾದ ಮೊದಲ ದಿನವೇ ಫ್ರಾನ್ಸ್ನ ಜಿಮ್ನ್ಯಾಸ್ಟ್ ಸಮೀರ್ ಅರ್ಹತಾ ಸುತ್ತಿನ ಪಂದ್ಯದ ವೇಳೆ ಕಾಲು ಮುರಿದುಕೊಂಡಿದ್ದರು...
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ಆರಂಭವಾದ ಮೊದಲ ದಿನವೇ ಫ್ರಾನ್ಸ್ನ ಜಿಮ್ನ್ಯಾಸ್ಟ್ ಸಮೀರ್ ಅರ್ಹತಾ ಸುತ್ತಿನ ಪಂದ್ಯದ ವೇಳೆ ಕಾಲು ಮುರಿದುಕೊಂಡಿದ್ದರು. ಇದೀಗ ಡಚ್ ಸೈಕ್ಲಿಸ್ಟ್ ಒಬ್ಬರು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಡಚ್ ಮಹಿಳಾ ಸೈಕ್ಲಿಸ್ಟ್ ಅನೀಮಿಕ್ ವ್ಯಾನ್ ಲೂಟನ್ ಅವರು ರಿಯೋ ಒಲಿಂಪಿಕ್ಸ್ ನಲ್ಲಿ ನಡೆಯುತ್ತಿರುವ ಸೈಕ್ಲಿಂಗ್ ನಲ್ಲಿ ಮುನ್ನಡೆಯಲ್ಲಿದ್ದಾಗಲೇ ಅಪಘಾತಕ್ಕೆ ತುತ್ತಾಗಿ ಬೆನ್ನು ಮೂಳೆ ಮುರಿದುಕೊಂಡಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅನೀಮಿಕ್ ವ್ಯಾನ್ ಲೂಟನ್ ಚಿನ್ನದ ಪದಕಕ್ಕೆ ಗುರಿ ಮುಟ್ಟಲು ಇನ್ನು 10 ಕಿ.ಮೀ ಬಾಕಿ ಇತ್ತು. ಈ ಸಂದರ್ಭದಲ್ಲಿ ವೇಗ ನಿಯಂತ್ರಿಸುವಾಗ ಅವರ ಸೈಕಲ್ ರಸ್ತೆ ಪಕ್ಕದ ಕಟ್ಟೆಗೆ ಗುದ್ದಿ ಪಲ್ಪಿ ಹೊಡೆದಿದೆ. ಈ ವೇಳೆ ಸೈಕಲ್ ನ ಹ್ಯಾಂಡಲ್ ಅವರ ಹೊಟ್ಟೆ ಭಾಗಕ್ಕೆ ಹೊಡೆದಿದೆ. ಬೆನ್ನುಮೂಳೆ ಮುರಿದಿದೆ ಎನ್ನಲಾಗಿದೆ.
ಸದ್ಯ ಅನೀಮಿಕ್ ಸ್ವಲ್ಪ ಚೇತರಿಸಿಕೊಂಡಿದ್ದು ಮುಂದಿನ 24 ಗಂಟೆಗಳ ಕಾಲ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.