ರಿಯೊ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಿಲ್ಲುಗಾರ್ತಿ ಲೈಶ್ರಾಮ್ ಬೊಂಬಯ್ಲಾ ದೇವಿ ಮತ್ತು ಬಾಕ್ಸರ್ ಮನೋಜ್ ಕುಮಾರ್.
ರಿಯೊ ಡಿ ಜನೈರೊ: ರಿಯೊ ಒಲಿಂಪಿಕ್ಸ್ ನಲ್ಲಿ ನಿನ್ನೆ ನಡೆದ ಐದನೇ ದಿನದ ಪಂದ್ಯದಲ್ಲಿ ಭಾರತದ ಅನುಭವಿ ಬಿಲ್ಲುಗಾರ್ತಿ ಲೈಶ್ರಾಮ್ ಬೊಂಬಯ್ಲಾ ದೇವಿ ಮಹಿಳಾ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಪ್ರೀಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ. ಅವರು 6-2 ಅಂತರದಲ್ಲಿ ಚೀನಾದ ತೈಪೆಯ ಲಿನ್ ಶಿಹ್ಹ್ ಚಿಯಾ ಅವರನ್ನು ಮಣಿಸಿದರು.
31 ವರ್ಷದ ಮಣಿಪುರದ ಲೈಶ್ರಾಮಾಗೆ ಇದು 3ನೇ ಒಲಿಂಪಿಕ್ಸ್.
ಭಾರತದ ಭರವಸೆಯ ಆಟಗಾರ ಮನೋಜ್ ಕುಮಾರ್ ಬಾಕ್ಸಿಂಗ್ ರಿಂಗ್ ನಲ್ಲಿ ಭರವಸೆ ಮೂಡಿಸಿದ್ದಾರೆ. 64 ಕೆಜಿ ವಿಭಾಗದ ಬಾಕ್ಸಿಂಗ್ ವಿಭಾಗದಲ್ಲಿ ಕಳೆದ ಲಂಡನ್ ಒಲಿಂಪಿಕ್ಸ್ ನ ಕಂಚಿನ ಪದಕ ವಿಜೇತ ಎವಲ್ದಾಸ್ ಪೆಟ್ರೌಸ್ಕಾಸ್ ಅವರನ್ನು 2-1 ಅಂತರದಲ್ಲಿ ಪರಾಭವಗೊಳಿಸಿದರು. ಅವರು ಭಾನುವಾರ ಉಸ್ಬೇಕ್ ಫಸ್ಲಿದ್ದೀನ್ ಗೈಬ್ನಝರೊವ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ ಆಡಲಿದ್ದಾರೆ.
ಪುರುಷರ 50 ಮೀಟರ್ ಪಿಸ್ತೂಲ್ ನಲ್ಲಿ ಭಾರತೀಯ ಶೂಟರ್ ಗಳಾದ ಜಿತು ರಾಯ್ ಮತ್ತು ಪ್ರಕಾಶ್ ನಂಜಪ್ಪ ಫೈನಲ್ ತಲುಪುವಲ್ಲಿ ವಿಫಲರಾಗಿದ್ದಾರೆ.
ನಿನ್ನೆ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿತು ರಾಯ್ 554 ಅಂಕ ಪಡೆದು 12ನೇ ಸ್ಥಾನ ತಲುಪಿದರು. ಟಾಪ್ 8 ಸ್ಥಾನ ಪಡೆದವರಿಗೆ ಮಾತ್ರ ಫೈನಲ್ ಪ್ರವೇಶಕ್ಕೆ ಅವಕಾಶವಿತ್ತು. ಆರಂಭಿಕ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಜಿತು 4ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸುವ ಭರವಸೆ ಮೂಡಿಸಿದ್ದರು. ಆದರೆ ನಂತರ ಹೆಚ್ಚಿನ ಪಾಯಿಂಟ್ ಕಲೆ ಹಾಕುವಲ್ಲಿ ವಿಫಲರಾಗಿ ಅಂತಿಮವಾಗಿ 12ನೇ ಸ್ಥಾನಕ್ಕೆ ಕುಸಿದರು. ಈ ಮುನ್ನ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಫೈನಲ್ ತಲುಪಿ 8ನೇ ಸ್ಥಾನಕ್ಕೆ ತೃಪ್ತರಾಗಿದ್ದರು.
ಪ್ರಕಾಶ್ ನಂಜಪ್ಪ ನಿರ್ಗಮನ: ಮತ್ತೊಬ್ಬ ಕನ್ನಡಿಗ ಶೂಟರ್ 50 ಮೀಟರ್ ಪಿಸ್ತೂಲ್ ನ ಅರ್ಹತಾ ಸುತ್ತಿನಲ್ಲಿ ಒಟ್ಟು 547 ಅಂಕ ಗಳಿಸಿ 25ನೇ ಸ್ಥಾನಕ್ಕೆ ತೃಪ್ತರಾದರು.