ಕೇಬಲ್ ತುಂಡಾಗಿ 60 ಅಡಿ ಎತ್ತರದಿಂದ ಮೈದಾನಕ್ಕೆ ಬಿದ್ದ ಓವರ್ ಹೆಡ್ ಕ್ಯಾಮರಾ
ರಿಯೊ ಡಿ ಜನೈರೊ: ಎತ್ತರದಲ್ಲಿಟ್ಟಿದ್ದ ಓವರ್ ಹೆಡ್ ಟೆಲಿವಿಷನ್ ಕ್ಯಾಮರಾ 60 ಅಡಿ ಎತ್ತರದಿಂದ ಆಟದ ಮೈದಾನಕ್ಕೆ ಬಿದ್ದು ಏಳು ಮಂದಿ ಗಾಯಗೊಂಡಿರುವ ಘಟನೆ ರಿಯೊ ಡಿ ಜನೈರೊದಲ್ಲಿ ಬಾಸ್ಕೆಟ್ ಬಾಲ್ ಪಂದ್ಯ ನಡೆಯುವ ಸ್ಥಳದ ಹೊರಗೆ ಒಲಿಂಪಿಕ್ಸ್ ಪಾರ್ಕ್ ನಲ್ಲಿ ನಡೆದಿದೆ.
ಮುಖ್ಯ ಒಲಿಂಪಿಕ್ ಪಾರ್ಕ್ ನ ಇಡೀ ವೀಕ್ಷಣೆಗೆ ದೊಡ್ಡ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಕ್ಯಾಮರಾದ ಎರಡು ಗೈಡ್ ಕೇಬಲ್ ಗಳು ಮುರಿದು ಈ ದುರಂತ ಸಂಭವಿಸಿದೆ ಎಂದು ಒಲಿಂಪಿಕ್ ಪ್ರಸಾರ ಸೇವೆ ತಿಳಿಸಿದೆ.
ಈ ಕುರಿತು ಮಾತನಾಡಿದ ಬ್ರಿಟನ್ ನ ಜಿಮ್ನಾಸ್ಟಿಕ್ ಪಂದ್ಯದ ಕ್ರೀಡಾಭಿಮಾನಿ ಕ್ರಿಸ್ ಆಡಮ್ಸ್, ಕೇಬಲ್ ಮುರಿಯುವ ಸದ್ದು ಕೇಳಿಸಿತು. ತಕ್ಷಣವೇ ಕ್ಯಾಮರಾ ಇಬ್ಬರು ಮಹಿಳೆಯರ ಮೇಲೆ ಬಿತ್ತು ಎಂದು ಹೇಳುತ್ತಾರೆ.
ಗಾಯಗೊಂಡವರಿಗೆ ಯಾವ ಪ್ರಮಾಣದಲ್ಲಿ ಆಗಿದೆ ಎಂದು ತಕ್ಷಣಕ್ಕೆ ಮಾಹಿತಿ ಸಿಗಲಿಲ್ಲ. ಓರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಿಯೊ ಗೇಮ್ ಸಂಘಟಕರು ಹೇಳಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಹೇಳಿದ್ದಾರೆ ಎಂದು ಒಲಿಂಪಿಕ್ ಪ್ರಸಾರ ಸೇವೆ ತಿಳಿಸಿದೆ. ಅದು ಘಟನೆ ಸಂಬಂಧ ಸಂಪೂರ್ಣ ತನಿಖೆ ಆರಂಭಿಸಿದೆ.
ಕ್ಯಾಮರಾ ಮುರಿದು ಬಿದ್ದ, ಗ್ಲಾಸು ಚೂರು ಸುತ್ತಮುತ್ತ ಚೆಲ್ಲಿದ ಸ್ಥಳದಲ್ಲಿ ಸಂಪೂರ್ಣ ತಡೆಯನ್ನು ರಚಿಸಲಾಗಿದೆ.