ಕ್ರೀಡೆ

ಒಲಿಂಪಿಕ್ಸ್ ಪದಕ ಗೆಲ್ಲುವ ಆಸೆಯನ್ನು ಅಮಾನುಷವಾಗಿ ಕಸಿದರು: ನರಸಿಂಗ್ ಯಾದವ್

Srinivasamurthy VN

ನವದೆಹಲಿ: ಕುಸ್ತಿ ಕ್ರೀಡೆಯಿಂದ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾದ ಬೆನ್ನಲ್ಲೇ ಅತೀವ ಬೆಸರ ವ್ಯಕ್ತಪಡಿಸಿರುವ ನರಸಿಂಗ್ ಯಾದವ್, ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಆಸೆಯನ್ನು  ಅಮಾನುಷವಾಗಿ ಕಸಿದಿದ್ದಾರೆ ಎಂದು ಹೇಳಿದ್ದಾರೆ.

ಉದ್ದೀಪನ ಮದ್ದು ಸೇವನೆ ಸಿಕ್ಕಿಬಿದ್ದ ಪ್ರಕರಣ ಸಂಬಂಧ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನರಸಿಂಗ್ ಯಾದವ್ ಗೆ ನಾಡಾ ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ  ಉದ್ದೀಪನ ಮದ್ದು ತಡೆ ಘಟಕ ವಾಡಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ಸಂಸ್ಥೆ (ಸಿಎಎಸ್) ಭಾರತದ ಕುಸ್ತಿಪಟುವಿಗೆ ನಾಲ್ಕು  ವರ್ಷಗಳ ನಿಷೇಧ ಹೇರಿದೆ.

ಸಿಎಎಸ್ ನಡೆಸಿದ ಸತತ ನಾಲ್ಕು ಗಂಟೆಗಳ ವಿಚಾರಣೆ ಬಳಿಕ ನರಸಿಂಗ್ ಯಾದವ್ ಮೇಲೆ ನಿಷೇಧ ಹೇರಲಾಗಿದ್ದು, ವಿಚಾರಣೆ ಬಳಿಕ ಇದೇ ಮೊದಲ ಬಾರಿಗೆ ನರಸಿಂಗ್ ಯಾದವ್  ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅತೀವ ಬೆಸರ ವ್ಯಕ್ತಪಡಿಸಿದ ಅವರು, ಸಿಎಎಸ್ ತೀರ್ಪು ನಿಜಕ್ಕೂ ನನ್ನ ಮನಸ್ಸನ್ನು ಛಿದ್ರಗೊಳಿಸಿದೆ. ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ಪದಕ  ಗಳಿಸಬೇಕು ಎಂಬ ಕನಸನ್ನು ನನಸು ಮಾಡಿಕೊಳ್ಳಲು ನಾನು ಕಳೆದ 2 ತಿಂಗಳಿನಿಂದ ನಡೆಸಿದ ಹೋರಾಟ ವ್ಯರ್ಥವಾಗಿದ್ದು, ಪದಕ ಗಳಿಸಬೇಕು ಎಂಬ ನನ್ನ ಕನಸನ್ನು ಅಮಾನುಷವಾಗಿ  ಕಸಿದುಕೊಳ್ಳಲಾಗಿದೆ. ಆದರೆ ಈ ಪ್ರಕರಣದಲ್ಲಿ ನಾನು ನಿರ್ದೋಷಿಯಾಗಿದ್ದು, ನಾನು ತಪ್ಪು ಮಾಡಿಲ್ಲ ಎಂದು ಖಂಡಿತಾ ಸಾಬೀತು ಪಡಿಸುವೆ ಎಂದು ಹೇಳಿದ್ದಾರೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಗ್ ಯಾದವ್ ಬೆಂಬಲಕ್ಕೆ ನಿಂತಿದ್ದ ಜೆಎಸ್ ಡಬಲ್ಯೂ ಸ್ಪೋರ್ಟ್ಸ್ ಸಂಸ್ಥೆ ಕೂಡ ತನ್ನ ಹೇಳಿಕೆ ಬಿಡುಗಡೆ ಮಾಡಿದ್ದು, ಸಿಎಎಸ್ ತೀರ್ಪಿನಿಂದಾಗಿ  ಸಂಪೂರ್ಣ ಅಸಂತುಷ್ಟಿಗೊಂಡಿರುವುದಾಗಿ ತಿಳಿಸಿದೆ. ಪ್ರಕರಣದಲ್ಲಿ ನರಸಿಂಗ್ ಯಾದವ್ ಅವರು ಯಾವುದೇ ತಪ್ಪು ಮಾಡಿಲ್ಲ. ಆದರೂ ಅವರು ದುರಾದೃಷ್ಟವಶಾತ್ ಅವರು ಬಲಿಯಾಗಿದ್ದಾರೆ.  ಹೀಗಾಗಿ ನಾವು ತೀರ್ಪನ್ನು ಮರು ಪರಿಶೀಲಿಸುವಂತೆ ಅರ್ಜಿ ಸಲ್ಲಿಸುವುದಾಗಿ ಹೇಳಿಕೆ ಬಿಡುಗೆಡೆ ಮಾಡಿದೆ.

SCROLL FOR NEXT