ನವದೆಹಲಿ: ರಿಯೋ ಒಲಿಂಪಿಕ್ಸ್ ನ ಮಹಿಳೆಯರ ಮ್ಯಾರಥಾನ್ ನಲ್ಲಿ 42.195 ಕಿ.ಮೀ ದೂರವನ್ನು ಪೂರೈಸಿದ ನಂತರ ಕುಸಿದು ಬಿದ್ದ ಭಾರತೀಯ ಅಥ್ಲೀಟ್ ಒ.ಪಿ. ಜೈಶಾ ಅವರಿಗೆ ನೀರು ಕೊಡಲು ಯಾವ ಒಬ್ಬ ಭಾರತೀಯ ಅಧಿಕಾರಿಯೂ ಅಲ್ಲಿರಿಲಿಲ್ಲ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ರಿಯೋದಲ್ಲಿ ಕುಡಿಯಲು ನೀರು ಸಿಗದೆ ನಾನು ಸಾಯುತ್ತಿದ್ದೆ ಎಂದು ಜೈಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥ್ಲೀಟ್ ಗಳಿಗೆ ಪ್ರತಿ 2.5 ಕಿ.ಮೀ ಮ್ಯಾರಥಾನ್ ಮುಗಿದ ಬಳಿಕ ರಿಫ್ರೆಶ್ ಮೆಂಟ್ ಪಾಯಿಂಟ್ ಬಳಿ ಇತರೆ ದೇಶಗಳ ಕ್ರೀಡಾಪಟುಗಳ ಜತೆ ಆಯಾ ದೇಶಗಳ ಅಧಿಕಾರಿಗಳು ಇದು ದುಬಾರಿ ಗ್ಲುಕೋಸ್, ಜೇನುತುಪ್ಪ, ಶಕ್ತಿವರ್ಧಕ ಹಾಗೂ ಪಾನಿಯಾ ನೀಡುತ್ತಾರೆ. ಆದರೆ ನನಗೆ ಕನಿಷ್ಠ ನೀರು ನೀಡುವವರೂ ಇರಲಿಲ್ಲ. ಇಂಥ ನಿರಾಸಕ್ತ ಭಾರತದ ಅಧಿಕಾರಿಗಳಿಗೆ ಕೃತಜ್ಞತೆ ಎಂದು ಜೈಶಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮ್ಯಾರಥಾನ್ ಮುಗಿದ ತಕ್ಷಣ ನಾನು ಪ್ರಜ್ಞೆ ತಪ್ಪಿ ಬಿದ್ದಿ ನನಗೆ ಏಳು ಬಾಟಲಿ ಗ್ಲುಕೋಸ್ ಅನ್ನು ನೀಡಲಾಯಿತು. 2-3 ಗಂಟೆಗಳ ನಂತರ ನನಗೆ ಪ್ರಜ್ಞೆ ಬಂದಿತ್ತು. ಆದರೆ ಕುಡಿಯಲು ನೀರು ಸಿಗದ ಪರಿಸ್ಥಿತಿಯಲ್ಲಿ ನಾನು ಹೇಗೆ ಮ್ಯಾರಥಾನ್ ಮುಗಿಸಿದೆ ಎಂಬುದೇ ನನಗೆ ತಿಳಿದಿಲ್ಲ ಎಂದು ಜೈಶಾ ಹೇಳಿದ್ದಾರೆ.
ಐಎಎಎಫ್ ನಿಯಮದ ಪ್ರಕಾರ ದಣಿವಾರಿಸಿಕೊಳ್ಳುವ ಕೇಂದ್ರದಲ್ಲಿ ತನ್ನದೇ ಅಧಿಕಾರಿಗಳನ್ನು ನಿಯೋಜಿಸುವುದು ಆಯಾ ಫೆಡರೇಷನ್ ಹಾಗೂ ಕೋಚ್ ಗಳ ಕರ್ತವ್ಯ. ಯಾವೊಬ್ಬ ಅಥ್ಲೀಟ್ ಬೇರೊಂದು ದೇಶದ ಟೇಬಲ್ ನಲ್ಲಿಟ್ಟ ಪಾನೀಯವನ್ನು ಬಳಸಿದರೆ ಸ್ಪರ್ಧೆಯಿಂದಲೇ ಅನರ್ಹಗೊಳಿಸಲಾಗುತ್ತದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಅಥ್ಲೀಟಿಕ್ಸ್ ಒಕ್ಕೂಟದ ಕಾರ್ಯದರ್ಶಿ ಸಿ.ಕೆ.ವಲ್ಸನ್ ಅವರು, ಕೋರ್ಸ್ ನುದ್ದಕ್ಕೂ ನೀರು, ಪಾನೀಯಗಳ ಸ್ಟಾಲ್ ಇವೆ.ಆದರೆ ಕ್ರೀಡಾಪಟುಗಳಿಗೆ ನಾವು ನೀರು, ಪಾನೀಯ ನೀಡಬೇಕು ಎಂದು ಕೋಚ್ ಗಳು ನಮಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ.