ನವದೆಹಲಿ: ರಿಯೋ ಒಲಿಂಪಿಕ್ಸ್ನಲ್ಲಿ ಕುಡಿಯಲು ನೀರಿಲ್ಲದೆ ನಾನು ಸಾಯುತ್ತಿದ್ದೆ ಎಂದಿದ್ದ ಭಾರತೀಯ ಅಥ್ಲೀಟ್ ಒ.ಪಿ.ಜೈಶಾ ಅವರ ಆರೋಪವನ್ನು ತಳ್ಳಿಹಾಕಿರುವ ಅವರ ಕೋಚ್ ನಿಕೊಲಾಯ್ ಸ್ನೆಸರ್ವೆ ಅವರು, ಸ್ವತಃ ಜೈಶಾ ಅವರೇ ತಮಗೆ ನೀರಿನ ವ್ಯವಸ್ಥೆ ಬೇಡ ಎಂದಿದ್ದರು ಎಂದು ಹೇಳಿದ್ದಾರೆ.
ಮ್ಯಾರಥಾನ್ ಓಟದ ಹಿಂದಿನ ದಿನ ದಾರಿ ಮಧ್ಯೆ ನೀರು ಮತ್ತು ಪಾನೀಯದ ವ್ಯವಸ್ಥೆ ಮಾಡುವ ಸಂಬಂಧ ಜೈಶಾ ಅವರೊಂದಿಗೆ ಮಾತುಕತೆ ನಡೆಸಿದ್ದೆವು, ಆದರೆ ಜೈಶಾ ನೀರಿನ ವ್ಯವಸ್ಥೆ ಮಾಡುವುದು ಬೇಡ ಎಂದಿದ್ದರು ಎಂದು ನಿಕೊಲಾಯ್ ಅವರು ಹೇಳಿದ್ದಾರೆ.
ರೇಸ್ನ ಹಿಂದಿನ ದಿನ ರಾಧಾಕೃಷ್ಣನ್ ನಾಯರ್ ಜೈಶಾಗೆ ಮಾರ್ಗಮಧ್ಯೆ ನೀರು ಮತ್ತು ಪಾನೀಯ ವ್ಯವಸ್ಥೆ ಮಾಡಬೇಕೆ ಎಂದು ಕೇಳಿದ್ದರು. ನಾನು ಜೈಶಾ ಬಳಿ ಮಾತುಕತೆ ನಡೆಸಿದಾಗ ಆಕೆ ನೀರಿನ ವ್ಯವಸ್ಥೆ ಬೇಡ. ಒಲಿಂಪಿಕ್ಸ್ ಆಯೋಜಕರು ಮಾಡಿರುವ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತೇನೆ. ಸಾಮಾನ್ಯ ನೀರನ್ನು ಮಾತ್ರ ಸೇವಿಸುತ್ತೇನೆ ಎಂದು ತಿಳಿಸಿದ್ದರು. ಇದನ್ನು ನಾನು ನಾಯರ್ ಅವರಿಗೆ ತಿಳಿಸಿದ್ದೆ. ಈ ಹಿಂದೆಯೂ ಸಹ ಜೈಶಾ ಆಯೋಜಕರು ನೀಡುವ ಸಾಮಾನ್ಯ ನೀರನ್ನು ಮಾತ್ರ ಉಪಯೋಗಿಸಿ ಹಲವು ರೇಸ್ಗಳಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಆಗಸ್ಟ್ನಲ್ಲಿ ಬೀಜಿಂಗ್ನಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲೂ ಸಹ ಆಕೆ ಆಯೋಜಕರು ನೀಡುವ ನೀರನ್ನು ಮಾತ್ರ ಬಳಸಿದ್ದರು ಎಂದು ನಿಕೋಲಾಯ್ ಸ್ಪಷ್ಟನೆ ನೀಡಿದ್ದಾರೆ.
ಅಥ್ಲೀಟ್ ಗಳಿಗೆ ಪ್ರತಿ 2.5 ಕಿ.ಮೀ ಮ್ಯಾರಥಾನ್ ಮುಗಿದ ಬಳಿಕ ರಿಫ್ರೆಶ್ ಮೆಂಟ್ ಪಾಯಿಂಟ್ ಬಳಿ ಇತರೆ ದೇಶಗಳ ಕ್ರೀಡಾಪಟುಗಳ ಜತೆ ಆಯಾ ದೇಶಗಳ ಅಧಿಕಾರಿಗಳು ಇದ್ದು ದುಬಾರಿ ಗ್ಲುಕೋಸ್, ಜೇನುತುಪ್ಪ, ಶಕ್ತಿವರ್ಧಕ ಹಾಗೂ ಪಾನಿಯಾ ನೀಡುತ್ತಾರೆ. ಆದರೆ ನನಗೆ ಕನಿಷ್ಠ ನೀರು ನೀಡುವವರೂ ಇರಲಿಲ್ಲ ಎಂದು ಜೈಶಾ ಆರೋಪಿಸಿದ್ದರು.