ಕ್ರೀಡೆ

ನನಗೆ ನಿವೃತ್ತಿಯಾಗಲು ಇದು ಸೂಕ್ತ ಸಮಯ: ಪುಲ್ಲೇಲ ಗೋಪಿಚಂದ್

Sumana Upadhyaya
ನವದೆಹಲಿ: ''ನನ್ನ ಅದೃಷ್ಟಕ್ಕೆ ನಾನು ಓದುವುದರಲ್ಲಿ ಹಿಂದಿದ್ದೆ. ಐಐಟಿ ಪರೀಕ್ಷೆಯಲ್ಲಿ ಫೇಲಾಗಿದ್ದು ಇಂದು ನಾನು ಒಬ್ಬ ಯಶಸ್ವಿ ಕ್ರೀಡಾಪಟುವಾಗಿ ಹೊರಹೊಮ್ಮಲು ದಾರಿಮಾಡಿಕೊಟ್ಟಿತು'' ಎಂದು ಹೇಳಿದ್ದು ಒಲಿಪಿಂಕ್ಸ್ ನಲ್ಲಿ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಅವರ ಗುರುವಾದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಪಟು ಪುಲ್ಲೇಲ ಗೋಪಿಚಂದ್.
''ನಾನು ಮತ್ತು ನನ್ನ ಸೋದರ ಇಬ್ಬರೂ ಕ್ರೀಡಾಪಟುಗಳು. ಆತ ಕ್ರೀಡೆಯಲ್ಲಿ ಉತ್ತಮನಾಗಿದ್ದ, ನಾನು ಚೆನ್ನಾಗಿ ಓದದೇ ಇದ್ದುದರಿಂದ ಇಂದು ನನಗೆ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಭಾವಿಸುತ್ತೇನೆ.'' ಎಂದು ಗೋಪಿಚಂದ್ ಹೇಳುತ್ತಾರೆ. ಪೋಷಕರ ಪ್ರೋತ್ಸಾಹ, ತ್ಯಾಗ, ಕೆಲವೊಮ್ಮೆ ಅದೃಷ್ಟ ಕೂಡ ನಮ್ಮ ಜೀವನದಲ್ಲಿ ಬೇಕಾಗುತ್ತದೆ ಎನ್ನುತ್ತಾರೆ ಅವರು.
ನನ್ನ ಸೋದರ ರಾಜ್ಯ ಮಟ್ಟದ ಚಾಂಪಿಯನ್. ಅವನು ಐಐಟಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ. ಐಐಟಿಗೆ ಸೇರಿದ ಮೇಲೆ ಆಟವಾಡುವುದನ್ನು ನಿಲ್ಲಿಸಿದ. ನಾನು ಎಂಜಿನಿಯರಿಂಗ್ ಪರೀಕ್ಷೆ ಬರೆದು ಅನುತ್ತೀರ್ಣನಾದೆ. ನಂತರ ಕ್ರೀಡೆಯಲ್ಲಿ ಮುಂದುವರಿದೆ. ಅದು ಇಂದು ನನ್ನನ್ನು ಇಲ್ಲಿ ತಂದು ನಿಲ್ಲಿಸಿದೆ. ನಿಮ್ಮ ಭವಿಷ್ಯದ ಬಗ್ಗೆ ಸರಿಯಾದ ಗುರಿ ಹೊಂದಿರಬೇಕು. ಅದರ ಜೊತೆಗೆ ಸ್ವಲ್ಪ ಅದೃಷ್ಟವೂ ಬೇಕು ಎನ್ನುತ್ತಾರೆ 42 ವರ್ಷದ ಗೋಪಿಚಂದ್.
2001ರಲ್ಲಿ ಆಲ್ ಇಂಗ್ಲೆಂಡ್ ಪ್ರಶಸ್ತಿ ಗಳಿಸಿದ್ದ ಗೋಪಿಚಂದ್ ನಂತರ ನಿವೃತ್ತಿ ಪಡೆದು ತಮ್ಮದೇ ಅಕಾಡೆಮಿ ಸ್ಥಾಪಿಸಿದರು. ಅಕಾಡೆಮಿ ಸ್ಥಾಪಿಸಲು ಆರಂಭದ ದಿನಗಳಲ್ಲಿ ಗೋಪಿಚಂದ್ ತುಂಬಾ ಕಷ್ಟಪಟ್ಟಿದ್ದರು. ಆಗಿನ ದಿನಗಳನ್ನು ನೆನಪಿಸಿಕೊಳ್ಳುವ ಅವರು, ಕೆಲ ವರ್ಷಗಳ ಹಿಂದೆ ಸರ್ಕಾರಿ ಕಚೇರಿಯೊಂದಕ್ಕೆ ಸಹಕಾರ ಮತ್ತು ಹಣಕಾಸಿನ ನೆರವು ಕೇಳಲು ಹೋಗಿದ್ದೆ. ಮೇಲಾಧಿಕಾರಿಯನ್ನು ಭೇಟಿ ಮಾಡಲು ಸತತ ಮೂರು ದಿನಗಳವರೆಗೆ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕಾದು ಕುಳಿತಿದ್ದೆ. ಕೊನೆಗೆ ಅವರನ್ನು ಭೇಟಿಯಾದಾಗ, ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲ ಎಂದು ಹೇಳಿದ್ದರು. ಅಂದೇ ಕೊನೆ ದಿನ, ನಾನು ಪ್ರಾಯೋಜಕತ್ವಕ್ಕೆ ಬೇರೆಯವರ ಬಳಿ ಹೋಗಿ ಸಹಾಯ ಕೇಳಿದ್ದು. ಅಂದೇ ರಾತ್ರಿ ಮನೆಗೆ ಹೋಗಿ ಮನೆಯನ್ನೇ ಅಡವಿಡಲು ನಿರ್ಧರಿಸಿದೆ. ಅದಕ್ಕೆ ನನ್ನ ಪೋಷಕರು ಮತ್ತು ಪತ್ನಿ ಬೆಂಬಲ ನೀಡಿದರು. ಮನೆ ಅಡವಿಟ್ಟು ಬಂದ ಹಣದಲ್ಲಿ ಹೈದರಾಬಾದಿನಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪಿಸಿದೆವು ಎಂದು ಗೋಪಿಚಂದ್ ನಿನ್ನೆ ದೆಹಲಿಯಲ್ಲಿ ಭಾರತ ಮೂಲಸೌಕರ್ಯ ಹಣಕಾಸು ಕಂಪೆನಿಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.
2004ರಲ್ಲಿ 25 ಮಕ್ಕಳಿಂದ ಆರಂಭಗೊಂಡ ಅಕಾಡೆಮಿಯಲ್ಲಿ ಇಂದು ಒಲಿಂಪಿಕ್ಸ್ ನಲ್ಲಿ ಪದಕ ಪಡೆಯುವ ಕ್ರೀಡಾಪಟುಗಳನ್ನು ತಯಾರು ಮಾಡಲು ಇಷ್ಟು ಬೇಗ ಸಾಧ್ಯವಾಗಬಹುದು ಎಂದು ಎಣಿಸಿರಲಿಲ್ಲ. ಪಿ.ವಿ.ಸಿಂಧು ನಮ್ಮ ಅಕಾಡೆಮಿಗೆ ಬಂದು ಸೇರಿದಾಗ ಅವಳಿಗೆ 8 ವರ್ಷ. ಪಿ.ಕಶ್ಯಪ್ ಗೆ 15 ವರ್ಷ. ಆತ ಆಗ ಎಲ್ಲರಿಗಿಂತ ಹಿರಿಯವ. ಅಕಾಡೆಮಿ ಆರಂಭಿಸಿದಾಗ ಒಲಿಂಪಿಕ್ ನಲ್ಲಿ ಪದಕ ಗೆಲ್ಲಬೇಕೆಂಬುದು ನನ್ನ ಗುರಿಯಾಗಿತ್ತು ಎಂದು ಹೆಮ್ಮೆಯಿಂದ ಗೋಪಿಚಂದ ಹೇಳುತ್ತಾರೆ.
''ಈ ಹೊತ್ತಿನಲ್ಲಿ ಬಹುಶಃ ನಾನು ನಿವೃತ್ತನಾಗಬೇಕೆಂದು ಭಾವಿಸುತ್ತೇನೆ, ಯಾಕೆಂದರೆ ನನ್ನ ಎಲ್ಲಾ ಗುರಿ ಈಡೇರಿದೆ ಎಂದು ಗೋಪಿಚಂದ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಹಾಜರಿದ್ದ ಪಿ.ವಿ.ಸಿಂಧು ಅವರ ತಂದೆ ಪಿ.ವಿ.ರಮಣ, ನಮ್ಮ ಮತ್ತು ಮಗಳ ಕಠಿಣ ಪರಿಶ್ರಮದಿಂದಾಗಿ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರುವ ಬದಲು ಅವರಿಗಿಷ್ಟವಾದ ವಿಷಯಗಳಿಗೆ ಪ್ರೋತ್ಸಾಹ ನೀಡಿದರೆ ಮಕ್ಕಳು ಇಷ್ಟಪಟ್ಟು ಕಲಿತು ಸಾಧನೆ ಮಾಡುತ್ತಾರೆ ಎಂದು ಹೇಳಿದರು.
SCROLL FOR NEXT