ಕ್ರೀಡೆ

ನಗದು ಬಿಕ್ಕಟ್ಟು; ಐ ಪಿ ಟಿ ಎಲ್ ಟೆನಿಸ್ ಸರಣಿಯಿಂದ ದೂರಸರಿದ ಫೆಡೆರರ್, ಸೆರೆನಾ

Guruprasad Narayana
ನವದೆಹಲಿ: ನವೆಂಬರ್ ೮ ರಂದು ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದ ನಿರ್ಧಾರದಿಂದ ದೇಶದಲ್ಲಿ ಉಂಟಾಗಿರುವ ನಗದು ಬಿಕ್ಕಟ್ಟಿನಿಂದ ಈ ವರ್ಷ ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐ ಪಿ ಟಿ ಎಲ್)ಗೆ ಕೂಡ ಬಿಸಿ ತಟ್ಟಿದೆ. ಇದೆ ಕಾರಣದಿಂದ ಖ್ಯಾತ ಟೆನಿಸ್ ತಾರೆಯರಾದ ರೋಜರ್ ಫೆಡೆರರ್ ಮತ್ತು ಸೆರೆನಾ ವಿಲಿಯಮ್ಸ್ ಸರಣಿಯಿಂದ ಹಿಂದೆ ಸರಿದಿದ್ದಾರೆ ಎಂದು ಆಯೋಜಕರು ಮಂಗಳವಾರ ಘೋಷಿಸಿದ್ದಾರೆ. 
ಹೈದರಾಬಾದ್ ನಲ್ಲಿ ನಡೆಯಲಿದ್ದ ೧೦೦,೦೦೦ ಡಾಲರ್ ಮೊತ್ತ ಪ್ರಶಸ್ತಿ ಹಣದ ಈ ಸರಣಿಯ ಫೈನಲ್ ಹಂತದಲ್ಲಿ ಫೆಡೆರರ್ ಮತ್ತು ಸೆರೆನಾ ಡಿಸೆಂಬರ್ ೯ ಮತ್ತು ೧೧ ರ ನಡುವೆ ಆಡಬೇಕಿತ್ತು. 
ಇಂಡಿಯನ್ ಏಸಸ್ ಜೊತೆಗೆ ಸ್ವಿಸ್ ಆಟಗಾರನು ಮತ್ತು ಸಿಂಗಾಪುರ್ ಸ್ಲಾಮ್ಮರ್ಸ್ ಜೊತೆಗೆ ಅಮೆರಿಕಾ ಆಟಗಾರ್ತಿಯೂ ಆಡುವುದಾಗಿ ನಿಗದಿಯಾಗಿತ್ತು. 
"ಈ ವರ್ಷದ  ಐ ಪಿ ಟಿ ಎಲ್ ನಲ್ಲಿ ರೋಜರ್ ಫೆಡೆರರ್ ಮತ್ತು ಸೆರೆನಾ ವಿಲಿಯಮ್ಸ್ ಭಾಗವಹಿಸುತ್ತಿಲ್ಲ ಎಂದು ಘೋಷಿಸಲು ದುಃಖವಾಗುತ್ತಿದೆ" ಎಂದು ಮಹೇಶ್ ಭೂಪತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
"ಭಾರತದಲ್ಲಿ ಸದ್ಯದ ಆರ್ಥಿಕ ಪರಿಸ್ಥಿತಿ ಹಣದ ಖರ್ಚಿನ ಬಗ್ಗೆ ಅಸ್ಥಿರತೆ ಹೊಂದಿದೆ. ನಾನು ಇದನ್ನು ರೋಜರ್ ಮತ್ತು ಸೆರೆನಾ ಅವರಿಗೆ ವಿವರಿಸಿದೆ. ಅವರು ಮೊದಲೆರೆಡು ಐ ಪಿ ಟಿ ಎಲ್ ಆವೃತ್ತಿಗಳನ್ನು ಬಹಳ ಬೆಂಬಲಿಸಿದ್ದರು, ಮುಂದಿನ ವರ್ಷಗಳಲ್ಲಿ ಅವರನ್ನು ಕರೆತರುವ ನಂಬಿಕೆಯಿದೆ" ಎಂದು ಕೂಡ ಅವರು ಹೇಳಿದ್ದಾರೆ. 
ಈ ಆವೃತ್ತಿಯಲ್ಲಿ ಒಟ್ಟು ೧೭ ಪಂದ್ಯಗಳು ನಡೆಯಲಿವೆ. 
SCROLL FOR NEXT