ನವದೆಹಲಿ: 2014 ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದಿದ್ದ ಭಾರತ- ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿದ್ದು ಬೇರೆ ಯಾರೂ ಅಲ್ಲ, ಟೀಂ ಇಂಡಿಯಾದ ಮಾಜಿ ಮ್ಯಾನೇಜರ್ ಸುನೀಲ್ ದೇವ್!.
ಹಿಂದಿ ದಿನಪತ್ರಿಕೆಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಕಾರ್ಯದರ್ಶಿಯಾಗಿರುವ ಸುನೀಲ್ ದೇವ್ ಮ್ಯಾಚ್ ಫಿಕ್ಸಿಂಗ್ನ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.
ಮ್ಯಾಂಚೆಸ್ಟರ್ನಲ್ಲಿ ಪಂದ್ಯ ಆರಂಭವಾಗುವ ಮುನ್ನ ಮಳೆ ಬಂದಿತ್ತು. ಪಿಚ್ನ ಗುಣವನ್ನಾಧರಿಸಿ ಟಾಸ್ ಗೆದ್ದರೆ ಮೊದಲು ಬೌಲಿಂಗ್ ಆಯ್ಕೆ ಮಾಡುವುದಾಗಿ ಟೀಂ ಇಂಡಿಯಾದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಧೋನಿಯವರ ಈ ತೀರ್ಮಾನ ಕೇಳಿ ತಂಡದ ಎಲ್ಲ ಆಟಗಾರರಿಗೂ ಆಶ್ಚರ್ಯವಾಯಿತು. ಕಾಮೆಂಟರಿ ಬಾಕ್ಸ್ನಲ್ಲಿದ್ದ ಇಂಗ್ಲೆಂಡ್ನ ಮಾಜಿ ನಾಯಕ ಜೆಫ್ರಿ ಬಾಯ್ಕೋಟ್ ಕೂಡಾ ಧೋನಿ ಆಯ್ಕೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಬ್ಯಾಟಿಂಗ್ ಆಯ್ಕೆ ಮಾಡಿದ್ದು ಮ್ಯಾಚ್ ಫಿಕ್ಸಿಂಗ್ ನ ಭಾಗವಾಗಿತ್ತು ಎಂಬುದು 100 ಪ್ರತಿಶತ ನಿಜ ಎಂದು ಸುನೀಲ್ ದೇವ್ ಹೇಳಿದ್ದಾರೆ.
ಸುನೀಲ್ ದೇವ್ ಅವರ ಮಾತುಕತೆಯನ್ನು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಲಾಯಿತು. ಈ ವಿಷಯವನ್ನು ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸ್ ಅವರಿಗೂ ತಿಳಿಸಲಾಗಿತ್ತು. ಆದರೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಜೀವ ಭಯದಿಂದಾಗಿ ಸಮಿತಿ ಮುಂದೆ ಯಾವುದೇ ವಿಷಯವನ್ನು ಬಹಿರಂಗ ಪಡಿಸಿಲ್ಲ. ಜಗತ್ತಿನಲ್ಲೇ ಉತ್ತಮವಾದ ಅಸೋಸಿಯೇಷನ್ ಆಗಿದೆ ಬಿಸಿಸಿಐ. ಆದ್ದರಿಂದ ನನ್ನ ಮಾತುಕತೆಯನ್ನು ರೆಕಾರ್ಡ್ ಮಾಡಿದರೆ ತಾನು ಅದನ್ನು ನಿರಾಕರಿಸುತ್ತೇನೆ ಎಂಬುದಾಗಿ ಸುನೀಲ್ ಮಾತುಕತೆಯಲ್ಲಿ ಹೇಳಿದ್ದಾರೆ.
ಆದಾಗ್ಯೂ, ಸುನೀಲ್ ಅವರ ಆರೋಪವನ್ನು ನ್ಯಾಯಾಧೀಶ ಮುಕುಲ್ ಮುಗ್ದಲ್ ನಿರಾಕರಿಸಿದ್ದಾರೆ. ಧೋನಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂದಾದರೆ ಅದನ್ನು ಲಿಖಿತ ರೂಪದಲ್ಲಿ ದೂರು ನೀಡಬೇಕಿತ್ತು. ಅಷ್ಟೇ ಅಲ್ಲ, ಫಿಕ್ಸಿಂಗ್ ಎಂಬುದ ತಕ್ಷಣ ನಡೆಯುವ ಕ್ರಿಯೆಯೂ ಅಲ್ಲ. ಮೂರಕ್ಕಿಂತ ಹೆಚ್ಚು ಆಟಗಾರರು ಭಾಗಿಯಾದರೆ ಮಾತ್ರ ಮ್ಯಾಚ್ ಫಿಕ್ಸಿಂಗ್ ನಡೆಸಲು ಸಾಧ್ಯ ಎಂದು ಮುಗ್ದಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics