ನವದೆಹಲಿ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಧೋನಿ ನಿವೃತ್ತಿಯಾಗುವ ಸಾಧ್ಯತೆ ಇತ್ತು. ಅಲ್ಲದೆ ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿದ ಧೋನಿ, ಏಷ್ಯಾಕಪ್, ಟಿ20 ವಿಶ್ವಕಪ್ ಬೆನ್ನಲ್ಲೇ ಐಪಿಎಲ್ ಬರಲಿದೆ. ನಂತರದಲ್ಲಿ ಭಾರತ ತಂಡ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಈ ನಡುವೆ 5-6 ಏಕದಿನ ಪಂದ್ಯಗಳಲ್ಲಷ್ಟೇ ಕಣಕ್ಕಿಳಿಯಲಿದೆ. ಹೀಗಾಗಿ ಈಗಲೇ ನಿವೃತ್ತಿ ಬಗ್ಗೆ ಚಿಂತಿಸುತ್ತಿಲ್ಲ ಎಂದು ಹೇಳಿದ್ದಾರೆ.
2014ರ ಅಂತ್ಯದಲ್ಲೇ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲಿನಿಂದ ಧೋನಿ ನಾಯಕತ್ವದ ಮೇಲೆ ಒತ್ತಡ ಬಂದಿದ್ದರೂ, ಆಸ್ಟ್ರೇಲಿಯಾ, ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆಲುವಿನಿಂದಾಗಿ ಈ ಬಿಸಿ ಸದ್ಯಕ್ಕೆ ತಣ್ಣಗಾಗಿತ್ತು.