ಕ್ರೀಡೆ

ಟಿ 20 ವಿಶ್ವಕಪ್ ನಂತರ ಶ್ರೀಲಂಕಾ ಬೌಲರ್ ಮಲಿಂಗಾ ನಿವೃತ್ತಿ?

Srinivas Rao BV

ಮೀರ್ ಪುರ: ಶ್ರೀಲಂಕಾ ತಂಡದ ಟಿ 20 ನಾಯಕ, ಬೌಲರ್ ಲಸಿತ್ ಮಲಿಂಗಾ ಐಸಿಸಿ ಟಿ 20 ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಸೂಚನೆ ನೀಡಿದ್ದಾರೆ.
ಮೊಣಕಾಲು ಗಾಯದಿಂದ ತೀವ್ರವಾಗಿ ಬಳಲುತ್ತಿರುವ ಹಿನ್ನೆಲೆಯಲ್ಲಿ ಲಸಿತ್ ಮಲಿಂಗಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ ಎಂಬ ವರದಿಗಳು ಬಂದಿವೆ. ಮಹೇಲಾ ಜಯವರ್ಧನೆ ಹಾಗೂ ಕುಮಾರ್ ಸಂಗಕ್ಕಾರ ಅವರು ಟಿ 20 ವಿಶ್ವಕಪ್ ನಂತರ ನೀವೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಮಲಿಂಗಾ 'ಸಾಧ್ಯತೆ ಇದೆ'  ಎಂದು ಪ್ರತಿಕ್ರಿಯಿಸಿದ್ದಾರೆ.
ತಮ್ಮನ್ನು ಕಾಡುತ್ತಿರುವ ಮೊಣಕಾಲು ಸಮಸ್ಯೆ ತೀವ್ರವಾಗಿದ್ದು, ದೀರ್ಘಾವಧಿ ವಿಶ್ರಾಂತಿ ತೆಗೆದುಕೊಳ್ಳಬೇಕಾದರೆ ನಾನು ಕ್ರಿಕೆಟ್ ಗೆ ವಿದಾಯ ಹೇಳಬೇಕಾಗುತ್ತದೆ. ಒಂದು ವೇಳೆ ಕಠಿಣ ಪಂದ್ಯಗಳನ್ನಾಡಿದರೆ ಮೊಣಕಾಲು ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು, ಆದ್ದರಿಂದಲೇ ಇನ್ನೆಷ್ಟು ತಿಂಗಳುಗಳು ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿರುತ್ತೇನೆ ಎಂಬುದು ತಿಳಿದಿಲ್ಲ ಎಂದು ಲಸಿತ್ ಮಲಿಂಗಾ ಹೇಳಿದ್ದಾರೆ.
ಟಿ 20 ವಿಶ್ವಕಪ್ ನಲ್ಲಿ ತಂಡಕ್ಕಾಗಿ ಉತ್ತಮವಾಗಿ ಆಡಲು ಅಗತ್ಯವಿರುವ ಎಲ್ಲಾ ರೀತಿಯ ನೋವು  ನಿವಾರಕ ಮತ್ತು ಚುಚ್ಚುಮದ್ದುಗಳನ್ನು ಪಡೆಯುತ್ತೇನೆ, ತಂಡಕ್ಕಾಗಿ ಉತ್ತಮವಾಗಿ ಆಡಲು ಇದು ನನಗಿರುವ ಅವಕಾಶ ಎಂದು ಮಲಿಂಗ ಹೇಳಿದ್ದಾರೆ.

SCROLL FOR NEXT