ಕ್ರೀಡೆ

ಐ ಲೀಗ್ 2015-16: ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿ ಬೆಂಗಳೂರು ಎಫ್ ಸಿ

Srinivas Rao BV

ಬೆಂಗಳೂರು: ಕಳೆದ ಐ ಲೀಗ್ ಆವೃತ್ತಿಯ ಅಂತಿಮ ಪಂದ್ಯದ ಕೊನೇ ಘಳಿಗೆಯಲ್ಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಬೆಂಗಳೂರು ಎಫ್ ಸಿ ಇದೇ ವಾರ ಆರಂಭವಾಗಲಿರುವ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದು ಕೋಚ್ ಆ್ಯಶ್ಲೆ ವೆಸ್ಟ್‍ವುಡ್ ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಫಿಫಾ ಕಟ್ಟಡದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಸ್ಟ್ ವುಡ್, ಒಂದು ತಂಡವಾಗಿ ನಾವು ಬಲಿಷ್ಠವಾಗಿದ್ದೇವೆ.  ತಂಡದ ಪ್ರಮುಖ ಆಟಗಾರರು ಐಎಸ್‍ಎಲ್ ಟೂರ್ನಿಯಲ್ಲಿನ ಅನುಭವ ಪಡೆದಿದ್ದಾರೆ. ಕಳೆದ 4 ವಾರಗಳಿಂದ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದು, ಉತ್ತಮ ತಯಾರಿ ನಡೆಸಿದ್ದೇವೆ. ಕಳೆದ ಆವೃತ್ತಿಯಲ್ಲಿ 16 -18 ಆಟಗಾರರನ್ನು ಹೊಂದಿದ್ದ ಬಿಎಫ್ ಸಿ ಈ ಬಾರಿ 8 ಹೊಸ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. 23 ಆಟಗಾರರು ಮತ್ತು 3 ಗೋಲ್‍ಕೀಪರ್ ಗಳು ಸೇರಿದಂತೆ ಒಟ್ಟು 26 ಆಟಗಾರರನ್ನು ಹೊಂದಿದೆ. ತಂಡಕ್ಕೆ ಹೊಸ ಆಟಗಾರರ ಸೇರ್ಪಡೆ ಸಮತೋಲನ ತಂದಿದೆ ಎಂದು ತಿಳಿಸಿದರು.
ಜವಾಬ್ದಾರಿಯ ಅರಿವಿದೆ ಛೆಟ್ರಿ: "ಸ್ಯಾಫ್  ಚಾಂಪಿಯನ್‍ಶಿಪ್ ಗೆಲ್ಲುವ ಮೂಲಕ ಹೊಸ ವರ್ಷವನ್ನು ಆರಂಭಿಸಿರುವುದು ಸಂತಸ ತಂದಿದೆ. ಐಎಸ್‍ಎಲ್ ಹಾಗೂ ಭಾರತ ತಂಡದ ಪರ ಆಟಗಾರರು ಉತ್ತಮ ಅನುಭವ ಹೊಂದಿದ್ದಾರೆ. ಆಟಗಾರರಾಗಿ ಬೆಳವಣಿಗೆ ಕಾಣುತ್ತಿದ್ದೇವೆ'' ಎಂದು ಭಾರತ ತಂಡದ ನಾಯಕ ಸುನೀಲ್ ಛೆಟ್ರಿ ಹೇಳಿದರು.

SCROLL FOR NEXT