ಬೆಂಗಳೂರು: ಭಾರತದ ರಾಷ್ಟ್ರೀಯ ಫುಟ್ಬಾಲ್ ರೆಫರಿಯಾಗಿರುವ ಜೆ. ಟೋನಿ ಅವರನ್ನು ಫಿಫಾ ಸಹಾಯಕ ರೆಫರಿಯನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಕಳೆದ 10 ವರ್ಷಗಳಿಂದ ಕರ್ನಾಟಕದಿಂದ ಯಾವುದೇ ರೆಫರಿ ಫಿಫಾ ಮಟ್ಟದಲ್ಲಿ ಕಾರ್ಯನಿರ್ವಹಿಸದ ಕೊರಗನ್ನು ನೀಗಿಸಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದ ಬಾಲಸುಬ್ರಮಣ್ಯಂ ಅವರ ಜತೆ ಟೋನಿ ಐಎಸ್ಎಲ್ ಟೂರ್ನಿಯಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದ್ದರು. ಜ.1, 2016ರಿಂದ ಟೋನಿ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಟೋನಿ ಸಾಧನೆಗೆ ರೆಫರಿ ಸಮಿತಿ ಮುಖ್ಯಸ್ಥ ಎಂ.ಎಸ್. ಕೃಷ್ಣ ಮೂರ್ತಿ, ಕೆಎಸ್‍ಎಫ್ಎ ಅಧ್ಯಕ್ಷ ಎ.ಆರ್. ಖಲೀಲ್, ಬಿಡಿಎಫ್ಎ ಅಧ್ಯಕ್ಷ ಎಂ.ಪಿ. ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.