ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಶನಿವಾರದಿಂದ 66ನೇ ಹಿರಿಯರ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ಪಂದ್ಯಾವಳಿ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುರುವಾಗಿದೆ.
ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ 29 ಪುರುಷರ ತಂಡಗಳು ಹಾಗೂ 24 ಮಹಿಳೆಯರ ತಂಡಗಳು ಸೇರಿದಂತೆ ಒಟ್ಟು 53 ತಂಡಗಳು ಭಾಗವಹಿಸುತ್ತಿವೆ. ಪಂದ್ಯಾವಳಿಯ ಫೈನಲ್ ಜನವರಿ 16ರಂದು ನಡೆಯುತ್ತಿದ್ದು, ಚಾಮುಂಡಿ ವಿಹಾರದ 2 ಒಳಾಂಗಣ ಹಾಗೂ 1 ಹೊರಾಂಗಣ ಅಂಕಣದಲ್ಲಿ 140 ಪಂದ್ಯಗಳು ಜರುಗಲಿವೆ. ಲೆವನ್ 1 ರ ಎ ಗುಂಪಿನಲ್ಲಿ ಕರ್ನಾಟಕ ಪುರುಷರ ತಂಡವಿದ್ದರೆ, ಮಹಿಳೆಯರ ವಿಭಾಗದಲ್ಲಿ ಬಿ ಗುಂಪಿನಲ್ಲಿ ರಾಜ್ಯದ ವನಿತೆಯರು ಸ್ಥಾನ ಪಡೆದಿದ್ದಾರೆ.
29 ವರ್ಷಗಳ ಬಳಿಕ ಮೈಸೂರಿನಲ್ಲಿ ಈ ಪಂದ್ಯಾವಳಿ ನಡೆಯುತ್ತಿರುವುದು ವಿಶೇಷ. 1987ರಲ್ಲಿ ಸಾಂಸ್ಕೃತಿಕ ನಗರಿಯಲ್ಲಿ 39ನೇ ಆವೃತ್ತಿ ನಡೆದಿತ್ತು, ಹೋದ ವರ್ಷ ರಾಜಸ್ತಾನದ ಬಿವಾರದಲ್ಲಿ ಪಂದ್ಯಾವಳಿ ನಡೆದಿತ್ತು. ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಉತ್ತರಾಖಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಉತ್ತರಾಖಂಡ ಹಾಗೂ ಛತ್ತೀಸ್ ಗಢ ಚಾಂಪಿಯನ್ ಆಗಿದ್ದವು. ಭಾರತ ಪುರುಷರ ತಂಡದ ನಾಯಕ ವಿಶೇಶ್ ಭೃಗುವಂಶಿ, ರಾಷ್ಟ್ರೀಯ ಮಹಿಳಾ ತಂಡದ ನಾಯಕಿ ಅನಿತಾ ಪೌಲ್ ದುರಾಯಿ ಸೇರಿದಂತೆ, ಕರ್ನಾಟಕದ ಹೆಸರಾಂತ ಅಂತಾರಾಷ್ಟ್ರೀಯ ಆಟಗಾರರಾದ ಅರವಿಂದ್ ಆರ್ಮುಗಂ, ಎಚ್. ಎಂ. ಬಾಂಧವ್ಯ ಮತ್ತು ರಾಜೇಶ್ ಉಪ್ಪಾರ್ ರಂಥ ಪ್ರಮುಖರು ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ.