ಚೆನ್ನೈ: ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಹಾಗೂ ವಿಶ್ವ ಟೆನಿಸ್ ರ್ಯಾಂಕಿಂಗ್ ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ, ಸ್ವಿಜರ್ಲೆಂಡ್‍ನ ಸ್ಟಾನಿಸ್ಲಾಸ್ ವಾವ್ರಿಂಕಾ ಚೆನ್ನೈ ಓಪನ್ ಎಟಿಪಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅವರು, ಕ್ರೊವೇಶಿಯಾದ 19 ವರ್ಷ ವಯಸ್ಸಿನ ಬೋರ್ನಾ ಕೊರಿಕ್ ವಿರುದ್ಧ 6-3, 7-5 ನೇರ ಸೆಟ್ ಗಳ ಅಂತರದಲ್ಲಿ ಗೆಲವು ಸಾಧಿಸಿ ಸತತ 3ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು.
ನಾಲ್ಕನೇ ಪ್ರಶಸ್ತಿ: ದಕ್ಷಿಣ ಏಷ್ಯಾದ ಏಕೈಕ ಎಟಿಪಿ ಟೂರ್ನಿದ ಈ ಪಂದ್ಯಾವಳಿಯಲ್ಲಿ ವಾವ್ರಿಂಕಾ ಇದೀಗ ನಾಲ್ಕು ಬಾರಿ ಈ ಪ್ರಶಸ್ತಿ ಗೆದ್ದ ಹಿರಿಮೆಗೆ ಭಾಜನರಾಗಿದ್ದಾರೆ. ಈ ಹಿಂದೆ, 2011, 2014, 2015ರಲ್ಲೂ ಅವರು ಪ್ರಶಸ್ತಿಗೆ ಭಾಜನರಾಗಿದ್ದರು.
ಭಾನುವಾರ ನಡೆದ ಫೈನಲ್ ಪಂದ್ಯದ ಆರಂಭದಿಂದಲೂ ಉತ್ತಮ ಹಿಡಿತ ಸಾಧಿಸಿದ ವಾವ್ರಿಂಕಾ, ಮೊದಲ ಸೆಟ್ ನಲ್ಲೇ ಕೊರಿಕ್ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಇವರ ಆರ್ಭಟದ ಪ್ರದರ್ಶನದ ಮುಂದೆ ಬೊರ್ನಾ ಕೊರಿಕ್ ಯಾವುದೇ ಹಂತದಲ್ಲಿ ಸಡ್ಡು ಹೊಡೆಯಲೇ ಇಲ್ಲ. ಇದರ ಪರಿಣಾಮ, ವಾವ್ರಿಂಕಾ ಮೊದಲ ಸೆಟ್ ನಲ್ಲಿ ಅನಾಯಾಸ ಜಯ ಕಂಡರು. ಆದರೆ, ದ್ವಿತೀಯ ಸೆಟ್ ನಲ್ಲಿ ವಾವ್ರಿಂಕಾ ಅವರ ಗೆಲವು ಇಷ್ಟು ಸುಲಭವಾಗಿರಲಿಲ್ಲ. ಆರಂಭದಿಂದಲೇ ತಿರುಗೇಟು ನೀಡಿದ ಕೊರಿಕ್, ವಾವ್ರಿಂಕಾಗೆ ಸವಾಲಾಗಿ ನಿಂತರು. ಅತ್ತ, ವಾವ್ರಿಂಕಾ ಸಹ ತೀವ್ರ ಪ್ರತಿರೋಧ ತೋರಿದರು. ಇವರಿಬ್ಬರ ಸಮಬಲದ ಹೋರಾಟದಿಂದಾಗಿ, ದೀರ್ಘವಾಗಿ ಎಳೆಯಲ್ಪಟ್ಟ ಸೆಟ್ ನಲ್ಲಿ ವಾವ್ರಿಂಕಾ ಅವರು ಜಯ ಪತಾಕೆ ಹಾರಿಸುವಲ್ಲಿ ಯಶಸ್ವಿಯಾದರು. ಇದು ವಾವ್ರಿಂಕಾ ಅವರ 12ನೇ ಎಟಿಪಿ ಪ್ರಶಸ್ತಿಯಾಗಿದ್ದು, ಹಾಲಿ ಟೂರ್ನಿಯಲ್ಲಿ ಚಾಂಪಿಯನ್ ಶಿಪ್ ಅಲಂಕರಿಸಿದ ಹಿನ್ನೆಲೆಯಲ್ಲಿ ಪಾರಿತೋಷಕ ಹಾಗೂ ರೂ 50 ಲಕ್ಷ ನಗದು ಪುರಸ್ಕಾರಕ್ಕೆ ಭಾಜನರಾದರಲ್ಲದೆ, ಚೆನ್ನೈ ಓಪನ್ ಟೂರ್ನಿಯ ತಮ್ಮ ಈವರೆಗಿನ ಪಯಣದಲ್ಲಿ ಸತತ 12 ಪಂದ್ಯ-ಗ-ಳಲ್ಲಿ ಅವರು ಜಯ
ಸಾಧಿಸಿದಂತಾಗಿದೆ.