ಸಿಡ್ನಿ: ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಸಿಡ್ನಿ ಅಂತಾರಾಷ್ಟ್ರೀಯ ಕ್ವಾರ್ಟರ್ ಫೈನಲ್ ನಲ್ಲಿ ಚೆನ್ ಲಿಯಾಂಗ್ ಮತ್ತು ಶ್ವೈ ಪೆಂಗ್ ಜೋಡಿಯನ್ನು 6-2, 6-3 ನೇರ ಸೆಟ್ ಗಳಿಂದ ಮಣಿಸಿದ್ದಾರೆ.
ಸಾನಿಯಾ-ಹಿಂಗಿಸ್ ಜೋಡಿ 28ನೇ ಡಬಲ್ಸ್ ಪಂದ್ಯವನ್ನು ಗೆದ್ದುಕೊಂಡಿದ್ದಾರೆ.ಈ ಮೂಲಕ 1994ರಲ್ಲಿ ಗಿಗಿ ಫೆರ್ನಾಂಡಿಸ್ ಮತ್ತು ನತಾಶಾ ಜ್ವೆರೆವಾ ಜೋಡಿ ಗೆದ್ದುಕೊಂಡಿದ್ದ 28ನೇ ಜಯದ ಜತೆಯಾಟ ಪಂದ್ಯಕ್ಕೆ ಸಮನಾಗಿದೆ. ಮಹಿಳೆಯರ ಮಿಕ್ಸ್ ಡ್ ಡಬಲ್ಸ್ ನಲ್ಲಿ ಈಗ ಸಾನಿಯಾ-ಹಿಂಗಿಸ್ ಜೋಡಿ ಮುಂಚೂಣಿಯಲ್ಲಿದೆ.
ಕಳೆದ ವರ್ಷದಿಂದ ಜತೆಯಾಗಿ ಆಡಲು ಆರಂಭಿಸಿದ್ದ ಸಾನಿಯಾ-ಹಿಂಗಿಸ್ ಜೋಡಿ ಇದುವರೆಗೆ 10 ಅಂತಾರಾಷ್ಟ್ರೀಯ ಮಹಿಳಾ ಟೆನ್ನಿಸ್ ಅಸೋಸಿಯೇಷನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕಳೆದ ವಾರವಷ್ಟೇ ಬ್ರಿಸ್ಬೇನ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯನ್ನು ಗೆದ್ದುಕೊಂಡಿದ್ದರು.
ಮೊದಲ ಸೆಟ್ ಸುಲಭವಾಗಿ ಗೆದ್ದು ಕೊಂಡ ಸಾನಿಯಾ–ಹಿಂಗಿಸ್ ಜೋಡಿ ಎರಡನೇ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ಎದುರಿಸಿತು. ಆದರೆ ಚುರುಕಿನ ಆಟ ಆಡಿದ ಆಟಗಾರ್ತಿಯರು ಗೆಲುವು ಒಲಿಸಿಕೊಂಡರು.