ಬೆಂಗಳೂರು: ದೇಸೀ ಕ್ರೀಡೆಯ ಸೊಬಗನ್ನು ರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆ ಕೊಂಡೊಯ್ದ ಪ್ರೋ ಕಬಡ್ಡಿ ಲೀಗ್‍ನ ಮೂರನೇ ಆವೃತ್ತಿಯು ಇದೇ ತಿಂಗಳು 30ರಿಂದ ಶುರುವಾಗುತ್ತಿದ್ದು ಬೆಂಗಳೂರು ಬುಲ್ಸ್ ತಂಡ, ತನ್ನ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಸೆಣಸಲಿದೆ.
ಇನ್ನು ಟೂರ್ನಿಯ ಬೆಂಗಳೂರು ಆವೃ ತ್ತಿಯು ಫೆ. 3ರಿಂದ ಆರಂಭಗೊಳ್ಳಲಿದ್ದು, ಆ ಸುತ್ತಿನಲ್ಲಿ ಬುಲ್ಸ್ ತಂಡದ ಮೊದಲ ಎದುರಾಳಿ ಪಟನಾ (ಪಾಟ್ನಾ) ಆಗಲಿದೆ. ಕಳೆದೆರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಪ್ರಶಸ್ತಿ ಸನಿಹ ಬಂದು ಎಡವಿರುವ ಬೆಂಗಳೂರು ಬುಲ್ಸ್ ತಂಡ ಈ ಬಾರಿ ಈ ಕೊರತೆಯನ್ನು ನೀಗಿಕೊಳ್ಳಲು ಪಣ ತೊಟ್ಟಿದೆ.
ಗುರುವಾರ ಹದಿನೇಳು ಯುವ ಆಟಗಾರರಿದ್ದ ತಂಡವನ್ನು ಅನಾವರಣಗೊಳಿಸಲಾದ ಸಂದರ್ಭದಲ್ಲಿ ತಂಡದ ನಾಯಕ ಸುರ್ಜೀತ್ ನರ್ವಾಲ್ ಹಾಗೂ ಕೋಚ್ ರಣಧೀರ್ ಸಿಂಗ್ ಪ್ರಶಸ್ತಿ ಜಯಿಸುವ ವಿಶ್ವಾಸ ವ್ಯಕ್ತಪಡಿಸಿದರು. 'ಕಳೆದ ಆವೃತ್ತಿಯಲ್ಲಿ ರನ್ನರ್‍ಅಪ್‍ಗೆ ಬುಲ್ಸ್ ತಂಡ ತೃಪ್ತಿಪಡಬೇಕಾಯಿತು. ಆದರೆ, ಈ ಬಾರಿ ಫ್ಲೆಯಿಂಗ್ ಮೆಷಿನ್ ಎಂದೇ ಕರೆಯಲಾಗುತ್ತಿರುವ ಸುರ್ಜಿತ್ ನರ್ವಾಲ್ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಭರವಸೆ ಇದೆ.
ಬಹುತೇಕ ಯುವ ಆಟಗಾರರಿರುವ ತಂಡ ಕೌಶಲದ ಕೊರತೆಯಿಂದೇನೂ ಕೂಡಿಲ್ಲ'' ಎಂದು ಕೋಚ್ ರಣಧೀರ್ ಸಿಂಗ್ ತಿಳಿಸಿದರು. ಹಣದ ಮಾಯೆ ಕಾರಣ ಬೆಂಗಳೂರು ಬುಲ್ಸ್ ತಂಡದ ಪ್ರಮುಖ ಆಟಗಾರ ಮಂಜಿತ್ ಚಿಲ್ಲರ್ ಅವರು ತಂಡವನ್ನು ತೊರೆಯಲು ಪ್ರಮುಖ ಕಾರಣ ಹಣವಲ್ಲದೆ ಬೇರೇನಲ್ಲ. ಅವರನ್ನೂ ಸೇರಿದಂತೆ ಯಾರನ್ನೂ ನಾವು ತಡೆಯಲಿಲ್ಲ ಎಂದು ಕಾಸ್ಕ್ರಿಕ್ ಸ್ಪೋಟ್ರ್ಸ್ ಲೀಗ್ ಪ್ರೈ.ಲಿ.ನ ಸಿಇಒ ಉದಯ್ ಸಿಂಹ ವಾಲಾ ತಿಳಿಸಿದರು.