ಮೆಲ್ಬೋರ್ನ್ : ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ಅಬ್ಬರದ ಮುಂದೆ ಸಂಪೂರ್ಣವಾಗಿ ಮಂಕಾದ ರಷ್ಯಾ ಟೆನಿಸ್ ತಾರೆ ಮರಿಯಾ ಶರಪೋವಾ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ 6-4, 6-1 ನೇರ ಸೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದರು. ಈ ಇಬ್ಬರ ನಡುವಣ ಕಾದಾಟ ಸಮಬಲರ ಕಾಳಗ ಎಂದೇ ಬಿಂಬಿತವಾಗಿತ್ತು. ಹಾಗಾಗಿ ಅಭಿಮಾನಿಗಳು ಮ್ಯಾರಥಾನ್ ಪಂದ್ಯದ ನಿರೀಕ್ಷೆಯಲ್ಲಿದ್ದರು. ಆದರೆ, ಅತ್ಯುತ್ತಮ ಲಯದಲ್ಲಿರುವ ಸೆರೆನಾ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಶರಪೋವಾ ಪ್ರಬಲ ಪೈಪೋಟಿ ನೀಡಲು ವಿಫಲರಾಗಿ, ಹೀನಾಯ ಸೋಲನುಭವಿಸಿದರು. ಈ ಜಯದಿಂದ ಸೆರೆನಾ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.
ಪಂದ್ಯದ ಆರಂಭದಿಂದಲೇ ನಿಯಂತ್ರಣ ಸಾಧಿಸಿದ ಸೆರೆನಾ, ಮೊದಲ ಗೇಮ್ ನಲ್ಲಿ 6-4ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಮೊದಲ ಶರಪೋವಾ ಒತ್ತಡಕ್ಕೆ ಸಿಲುಕಿದರು. ಎರಡನೇ ಸೆಟ್ ನಲ್ಲಿ ಇದರ ಲಾಭ ಪಡೆದ ವಿಲಿಯಮ್ಸ್ ಮತ್ತಷ್ಟು ಒತ್ತಡ ಹಾಕಿ 6-1ರ ಸುಲಭ ಮುನ್ನಡೆಯೊಂದಿಗೆ ಪಂದ್ಯವನ್ನು ಗೆದ್ದುಕೊಂಡರು. ಸೆರೆನಾ ತಮ್ಮ ಮುಂದಿನ ಪಂದ್ಯದಲ್ಲಿ ಅಗ್ನೆಸ್ಕಾ ರಾಡ್ವಾಂಸ್ಕಾ ವಿರುದ್ಧ ಸೆಣಸಲಿದ್ದಾರೆ.
ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋಲೆಂಡ್ ನ ಆಗ್ನೆಸ್ಕಾ ರಾಡ್ವಾಂಸ್ಕಾ ಸುಲಭ ಜಯ ಸಾಧಿಸಿದರು. 4ನೇ ರ್ಯಾಂಕಿಂಗ್ ನ ರಾಡ್ವಾಂಸ್ಕಾ, ತಮ್ಮ ಪ್ರತಿಸ್ಪರ್ಧಿ ಕಾರ್ಲಾ ಸುರೇಜ್ ನವಾರೊ ವಿರುದ್ಧ 6-1, 6-3 ಸೆಟ್ ಗಳ ಅಂತರದಲ್ಲಿ ಜಯಿಸಿದ್ದಾರೆ.