ಕ್ರೀಡೆ

ಭಾರತದ ಧ್ವಜ ಹಾರಿಸಿದ ಕೊಹ್ಲಿ ಅಭಿಮಾನಿಗೆ 10 ವರ್ಷ ಜೈಲು ಶಿಕ್ಷೆ

Shilpa D

ಲಾಹೋರ್: ಕ್ರಿಕೆಟಿಗ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ ಪಾಕಿಸ್ತಾನೀಯನೊಬ್ಬ, ತನ್ನ ಮನೆಯಲ್ಲಿ ಭಾರತದ ಧ್ವಜ ಹಾರಿಸಿದ್ದಕ್ಕಾಗಿ 10 ವರ್ಷ ಕಾಲ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.

ಪಾಕ್ ನೆಲದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಉಮರ್ ದ್ರಾಜ್ ಎಂಬಾತನನ್ನು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪಂಜಾಬ್ ಪ್ರಾಂತ್ಯದ ಒಕಾರ ಜಿಲ್ಲೆಯಲ್ಲಿ ಟೈಲರ್ ಕೆಲಸ ಮಾಡುತ್ತಿರುವ ಉಮರ್, ಜನವರಿ 26ರಂದು ಭಾರತವು ಟಿ20 ಪಂದ್ಯದಲ್ಲಿ ಆಸ್ಚ್ರೇಲಿಯಾವನ್ನು ಸೋಲಿಸಿದಾಗ ಮತ್ತು ಕೊಹ್ಲಿ ಅದ್ಭುತವಾಗಿ ಅಜೇಯ 90 ರನ್ ಸಿಡಿಸಿದಾಗ ಸಂತಸಗೊಂಡಿದ್ದ. ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ ಈತ ಮನೆಯಲ್ಲಿ ಭಾರತ ಧ್ವಜ ಹಾರಿಸಿದ್ದ.

ಪೊಲೀಸರು ಆತನ ವಿರುದ್ಧ ಪಾಕಿಸ್ತಾನಿ ದಂಡ ಸಂಹಿತೆಯ 123 ಎ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ನಿಭಾವಣೆಗೆ ಅಡ್ಡಿಯೊಡ್ಡಿದ ಕೇಸು ದಾಖಲಿಸಿದ್ದಾರೆ. ಆರೋಪ ಸಾಬೀತಾದರೆ 123ಎ ಅನುಸಾರ ಆತನಿಗೆ ಗರಿಷ್ಠ ಶಿಕ್ಷೆಯೆಂದರೆ 10 ವರ್ಷಗಳ ಕಾರಾಗೃಹವಾಸ ಅನುಭವಿಸಬೇಕಾದೀತು. ಕೊಹ್ಲಿ ಮೇಲಿನ ಅಭಿಮಾನದಿಂದಾಗಿಯೇ ಭಾರತದ ಧ್ವಜ ಹಾರಿಸಿರುವುದಾಗಿ ಉಮರ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ತಮ್ಮ ವಶಕ್ಕೆ ಕೇಳಿದರೂ, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಕಸ್ಟಡಿ ವಿಧಿಸಿದೆ.

ಪತ್ರಕರ್ತರೊಂದಿಗೆ ಮಾತನಾಡಿದ್ದ ಉಮರ್, ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಕೊಹ್ಲಿಯಿಂದಾಗಿಯೇ ನಾನು ಭಾರತ ತಂಡವನ್ನು ಬೆಂಬಲಿಸುತ್ತಿದ್ದೇನೆ. ನನ್ನ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದು ಕೊಹ್ಲಿ ಮೇಲಿನ ನನ್ನ ಅಭಿಮಾನದ ಸಂಕೇತ" ಎಂದು ಪೊಲೀಸರ ಬಳಿ ಹೇಳಿದ್ದಾನೆ.

SCROLL FOR NEXT