ನವದೆಹಲಿ: ಬ್ರೆಜಿಲ್ ನ ರಿಯೋ ಡಿ ಜೆನೈರೋ ನಲ್ಲಿ ನಡೆಯಲಿರುವ ರಿಯೋ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಲಿರುವ ಅಥ್ಲೀಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಶುಭ ಹಾರೈಸಿದ್ದಾರೆ.
ನವದೆಹಲಿಯ ಮಾಣಿಕ್ ಶಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಕ್ರೀಡಾಪಟುಗಳೊಂದಿಗೆ ವೈಯಕ್ತಿಕ ಸಂಭಾಷಣೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲರಿಗೂ ಶುಭ ಹಾರೈಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್, ಕ್ರೀಡಾ ಕಾರ್ಯದರ್ಶಿ ರಾಜೀವ್ ಜಾದವ್, ಅಖಿಲ ಭಾರತ ಕ್ರೀಡಾ ಪರಿಷತ್ ನ ಅಧ್ಯಕ್ಷ ವಿಜಯ್ ಮಲ್ಹೋತ್ರ, ಭಾರತೀಯ ಒಲಂಪಿಕ್ ಸಂಘದ ಅಧ್ಯಕ್ಷ ಎನ್ ರಾಮಚಂದ್ರನ್, ಹಾಕಿ ಇಂಡಿಯಾದ ಅಧ್ಯಕ್ಷ ನರೀಂದರ್ ಬಾತ್ರಾ ಸೇರಿದಂತೆ ಇನ್ನೂ ಹಲವು ಕ್ರೀಡಾ ಕ್ಷೇತ್ರದ ಗಣ್ಯರು ಮಾಣಿಕ್ ಶಾ ಕೇಂದ್ರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಿಸ್ತೂಲ್ ಶೂಟರ್ ಗಳಾದ ಜಿತು ರೈ, ಮಾನವಜೀತ್ ಸಿಂಗ್ ಸಂಧು, ಹಿನಾ ಸಂಧು, ಬ್ಯಾಡ್ಮಿಂಟನ್ ಆಟಗಾರರಾದ ಪಿ ವಿ ಸಿಂಧು, ಕೆ ಶ್ರೀಕಾಂತ್, ಬಾಕ್ಸರ್ ಶಿವ ಥಾಪಾ, ಅಥ್ಲೀಟ್ ಸುಧಾ ಸಿಂಗ್ ಹಾಗೂ ಲಲಿತಾ ಬಾಬರ್ ಸೇರಿದಂತೆ ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾದ ಅಥ್ಲೀಟ್ ಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಈ ವರೆಗೂ ಸುಮಾರು 13 ಕ್ರೀಡೆಗಳಿಂದ 100 ಕ್ರೀಡಾಪಟುಗಳು ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಅಥ್ಲೀಟ್ ಗಳು ರಿಯೋ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ, ಇದಕ್ಕೂ ಮುನ್ನ 2012 ರಲ್ಲಿ ಲಂಡನ್ ನಲ್ಲಿ ನಡೆದ ರಿಯೋ ಒಲಂಪಿಕ್ಸ್ ಗೆ ಭಾರತದಿಂದ 83 ಕ್ರೀಡಾಪಟುಗಳು ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದದ್ದು ದಾಖಲೆಯಾಗಿತ್ತು. ಈ ಸಾಲಿನಲ್ಲಿ ಸುಮಾರು 110 ಕ್ರೀಡಾಪಟುಗಳು ಭಾರತದಿಂದ ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.