ಪ್ಯಾರಿಸ್: ಬಹು ನಿರೀಕ್ಷಿತ ಯೂರೋ ಕಪ್ 2016 ಪಂದ್ಯಾವಳಿ ಚಾಂಪಿಯನ್ ಆಗಿ ಪೋರ್ಚುಗಲ್ ಹೊರಹೊಮ್ಮಿದ್ದು, ರೋನಾಲ್ಡೋ ಗಾಯದ ಸಮಸ್ಯೆ ಹೊರತಾಗಿಯೂ ಫ್ರಾನ್ಸ್ ವಿರುದ್ಧ 1-0 ಅಂತರದ ರೋಚಕ ಗೆಲುವು ಸಾಧಿಸಿದೆ.
ಪೋರ್ಚುಗಲ್ ಪಾಲಿಗೆ ಸೋಮವಾರ ನಿಜಕ್ಕೂ ಇತಿಹಾಸಗಳಲ್ಲಿ ಎಂದೂ ಮರೆಯದ ದಿನವಾಗಿದ್ದು, ಅಂತಾರಾಷ್ಟ್ರೀಯ ಟ್ರೋಫಿಯೊಂದನ್ನು ಎತ್ತಿ ಹಿಡಿದ ಸಾಧನೆ ಮಾಡಿದೆ. ಭಾನುವಾರ ರಾತ್ರಿ ನಡೆದ ಯುರೋ ಕಪ್ ಫೈನಲ್‍ನಲ್ಲಿ ಬದಲಿ ಆಟಗಾರ ಎಡರ್ ದಾಖಲಿಸಿದ ಏಕೈಕ ಗೋಲು ಪೋರ್ಚುಗಲ್ ಗೆ ಮೊಟ್ಟಮೊದಲ ಟ್ರೋಫಿ ಎತ್ತಿ ಹಿಡಿಯುವಂತೆ ಮಾಡಿದೆ. ಆರಂಭದಿಂದಲೂ ತೀವ್ರ ಕುತೂಹಲ ಕೆರಳಸಿದ್ದ ಪಂದ್ಯದಲ್ಲಿ ಮೊದಲ 9 ನಿಮಿಷಗಳ ಆಟ ಸಮಬಲದೊಂದಿಗೆ ಸಾಗಿತ್ತು.
ಈ ವೇಳೆ ಫ್ರಾನ್ಸ್ ನ ಆಟಗಾರ ವಿ೦ಗರ್ ಡಿಮಿಟ್ರಿ ಪಯೆಟ್ ಹಾಗೂ ಪೋರ್ಚುಗಲ್ ರೊನಾಲ್ಡೊ ಅವರ ನುಡವೆ ಬಾಲ್ ಗಾಗಿ ಏರ್ಪಟ್ಟ ಪೈಪೋಟಿಯಲ್ಲಿ ರೊನಾಲ್ಡೋ ಅವರ ಎಡ ಮೊಣಕಾಲಿಗೆ ಗಂಭೀರ ಏಟು ಬಿದ್ದಿತು. ಕೆಲ ಕ್ಷಣಗಳ ಬಳಿಕ ಗಾಯದಿ೦ದ ಚೇತರಿಸಿಕೊಳ್ಳಲು ವಿಫಲರಾದ ರೊನಾಲ್ಡೊ 24ನೇ ನಿಮಿಷದಲ್ಲಿ ಕಣ್ಣೇರು ಹಾಕುತ್ತಲೇ ಅಂಗಳ ತೊರೆದರು. ಪೋರ್ಚಗಲ್ ನಾಯಕನ ರೊನಾಲ್ಡೊ ಅವರನ್ನು ಸ್ಟ್ರೆಚರ್ ನಲ್ಲಿ ಹೊತ್ತೊಯ್ಯುತ್ತಿದ್ದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಪ್ರೇಕ್ಷಕರು ಕಣ್ಣೀರು ಹಾಕುತ್ತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗುತ್ತಿತ್ತು.
ಆದರೆ ಹೆಚ್ಚುವರಿ ಆಟಗಾರನಾಗಿ ಕಣಕ್ಕಳಿದಿದ್ದ ಎಡರ್ ತಮ್ಮ ಚೂಚ್ಚಲ ಯುರೋ ಕಪ್ ಗೋಲಿನ ಮೂಲಕ ರಾಷ್ಟ್ರಕ್ಕೆ ಚೊಚ್ಚಲ ಪ್ರಶಸ್ತಿ ಗೆಲ್ಲಿಸಿಕೊಟ್ಟರು. ಪಂದ್ಯದ 78ನೇ ನಿಮಿಷದಲ್ಲಿ ರೆನಾಟೊ ಸ್ಯಾ೦ಚೆಸ್‍ರ ಬದಲಿಗೆ ಕಣಕ್ಕಿಳಿದಿದ್ದ ಎಡರ್ ಹೆಚ್ಚುವರಿ ಆಟ ಅಂದರೆ 109ನೇ ನಿಮಿಷದಲ್ಲಿ ಆಕರ್ಷಕ ಗೋಲು ಭಾರಿಸಿದರು. ಇದು ಪೋರ್ಚುಗಲ್ ಪಾಲಿಗೆ ನಿಜಕ್ಕೂ ಗೋಲ್ಡನ್ ಗೋಲು ಆಗಿತ್ತು. ಏಕೆಂದರೆ ಈ ಗೋಲು ಗಳಿಸಿದ ಬಳಿಕ ಅತ್ಯಂತ ಎಚ್ಚರಿಂದ ಆಡಿದ ಪೋರ್ಚುಗಲ್ ತಂಡ ಎದುರಾಳಿ ತಂಡಕ್ಕೆ ಹೆಚ್ಚಿನ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿ ಆಡಿತು.
ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಂತೆ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಬಂದ ರೊನಾಲ್ಡೋ ಕ್ರೀಡಾಂಗಣದ ಹೊರಗೆ ಇದ್ದುಕೊಂಡೇ ಇತರೆ ಆಟಗಾರರಿಗೆ ಮಾರ್ಗದರ್ಶನ ಮಾಡಿದರು. ಅಂತಿಮವಾಗಿ ಪೋರ್ಚುಗಲ್ ತಂಡ 1-0 ಅಂತರದಿಂದ ಐತಿಹಾಸಿಕ ಯೂರೋಕಪ್ ಜಯಿಸಿದೆ. ಈ ಹಿಂದೆ ಪೋರ್ಚುಗಲ್ ಅನೇಕ ಮಹತ್ವದ ಟೂನಿ೯ಗಳ ಸೆಮಿಫೈನಲ್ ಹ೦ತ ತಲುಪಿತ್ತಾದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವುದರಲ್ಲಿ ವಿಫಲವಾಗಿತ್ತು. ಆ ತಪ್ಪು ಮತ್ತೆ ಇಲ್ಲಿ ಮರುಕಳಿಸದಿರಲಿ ಎಂಬ ಅಭಿಮಾನಿಗಳ ಪ್ರಾರ್ಥನೆ ಫಲಿಸಿದ್ದು, 2016ರ ಯೂರೋಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.