ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಷನ್ ನ(ಡಬ್ಲ್ಯುಬಿಒ) ಏಷ್ಯಾ ಪೆಸಿಪಿಕ್ ಸೂಪರ್ ಮಿಡಲ್ ವೇಟ್ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ರನ್ನು ಸೋಲಿಸಿ ವೃತ್ತಿ ಪರ ಬಾಕ್ಸಿಂಗ್ ನಲ್ಲಿ ತಮ್ಮ ಮೊದಲ ಪ್ರಶಸ್ತಿ ಗೆದ್ದಿದ್ದಾರೆ.
ನಿನ್ನೆ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 10 ಸುತ್ತುಗಳ ಕಠಿಣ ಹೋರಾಟದ ಪಂದ್ಯದಲ್ಲಿ ವಿಜೇಂದರ್ ಸಿಂಗ್ ವೇಲ್ಸ್ ಮೂಲದ ಅಸೀಸ್ ಬಾಕ್ಸರ್ ಕೆರ್ರಿ ಹೋಪ್ ರನ್ನು ಮಣಿಸಿದ್ದಾರೆ. ಇನ್ನು ಬಾಕ್ಸಿಂಗ್ ಕಣದಲ್ಲಿ ವಿಜಿಗೆ ಇದು ಸತತ 7ನೇ ಗೆಲುವಾಗಿದೆ.
ಈ ಹಿಂದಿನ ಆರು ಪಂದ್ಯಗಳಲ್ಲಿ ನಾಕೌಟ್ ಮೂಲಕ ಗೆಲುವು ಸಾಧಿಸಿದ್ದ ವಿಜಿ ಇದೇ ಮೊದಲ ಬಾರಿಗೆ ಬಾಕ್ಸಿಂಗ್ ರಿಂಗ್ ನಲ್ಲಿ ಗರಿಷ್ಠ ಸಮಯ ಫೈಟ್ ಮಾಡಿದ್ದಾರೆ. 6 ಅಡಿ ಎತ್ತರದ ವಿಜೇಂದರ್ 98-92, 98-92, 100-90 ರಿಂದ ಗೆಲುವು ಸಾಧಿಸಿದ್ದಾರೆ.
12 ವರ್ಷಗಳ ಅನುಭವಿ ಬಾಕ್ಸರ್ 32 ಪಂದ್ಯಗಳನ್ನಾಡಿ 23 ಪಂದ್ಯಗಳಲ್ಲಿ ಗೆದ್ದಿದ್ದ ಕೆರ್ರಿ ಹೋಪ್ ರನ್ನು ಕೇವಲ 1 ವರ್ಷದ ಅನುಭವಿ ವಿಜೇಂದರ್ ಬಿಗಿ ಪಂಚ್ ಗಳ ಮೂಲಕ ಸರಣಾಗುವಂತೆ ಮಾಡಿದರು.