ನವದೆಹಲಿ: ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪದ ಮೇಲೆ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಷನ್ ನ(ಡಬ್ಲ್ಯುಬಿಒ) ಏಷ್ಯಾ ಪೆಸಿಪಿಕ್ ಸೂಪರ್ ಮಿಡಲ್ ವೇಟ್ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ರನ್ನು ಸೋಲಿಸಿ ವೃತ್ತಿ ಪರ ಬಾಕ್ಸಿಂಗ್ ನಲ್ಲಿ ತಮ್ಮ ಮೊದಲ ಪ್ರಶಸ್ತಿ ಗೆದ್ದಿದ್ದ ವಿಜೇಂದರ್ ಸಿಂಗ್ ಅವರು ತ್ರಿವರ್ಣ ಧ್ವಜದ ಚಡ್ಡಿ(ಶಾರ್ಟ್ಸ್) ತೊಟ್ಟು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಉಲ್ಲಾಸ್ ಎಂಬುವರು ನ್ಯೂ ಅಕೋಶ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರಿನನ್ವಯ ವಿಜೇಂದರ್ ಸಿಂಗ್ ವಿರುದ್ದ ಪೊಲೀಸರು ದೂರು ದಾಖಲಿಸಿದ್ದಾರೆ. ಜೇಂದರ್ ಸಿಂಗ್ ರಣಕಣದಲ್ಲಿ ತೊಟ್ಟಿದ್ದ ಚಡ್ಡಿಯ ಹಿಂಭಾಗದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಮುದ್ರಿಸಲಾಗಿದ್ದು, ಇಂದರಿಂದ ರಾಷ್ಟ್ರಧ್ವಜ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಉಲ್ಲಾಸ್ ದೂರಿನಲ್ಲಿ ತಿಳಿಸಿದ್ದಾರೆ.
ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 10 ಸುತ್ತುಗಳ ಕಠಿಣ ಹೋರಾಟದ ಪಂದ್ಯದಲ್ಲಿ ವಿಜೇಂದರ್ ಸಿಂಗ್ ವೇಲ್ಸ್ ಮೂಲದ ಅಸೀಸ್ ಬಾಕ್ಸರ್ ಕೆರ್ರಿ ಹೋಪ್ ರನ್ನು ಮಣಿಸಿದ್ದರು. ಇನ್ನು ಬಾಕ್ಸಿಂಗ್ ಕಣದಲ್ಲಿ ವಿಜಿಗೆ ಇದು ಸತತ 7ನೇ ಗೆಲುವಾಗಿತ್ತು. ಈ ಹಿಂದಿನ ಆರು ಪಂದ್ಯಗಳಲ್ಲಿ ನಾಕೌಟ್ ಮೂಲಕ ಗೆಲುವು ಸಾಧಿಸಿದ್ದ ವಿಜಿ ಇದೇ ಮೊದಲ ಬಾರಿಗೆ ಬಾಕ್ಸಿಂಗ್ ರಿಂಗ್ ನಲ್ಲಿ ಗರಿಷ್ಠ ಸಮಯ ಫೈಟ್ ಮಾಡಿದ್ದರು. 6 ಅಡಿ ಎತ್ತರದ ವಿಜೇಂದರ್ 98-92, 98-92, 100-90 ರಿಂದ ಗೆಲುವು ಸಾಧಿಸಿದ್ದಾರೆ.