ಆರಂಭಿಕ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್
ಕಿಂಗ್ ಸ್ಟನ್: ಶನಿವಾರ ಪ್ರಾರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬೆರಳಿನ ಗಾಯದಿಂದ ನರಳುತ್ತಿರುವ ಮುರಳಿ ವಿಜಯ್ ಬದಲಿಗೆ ಭರವಸೆಯ ಆರಂಭಿಕ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್ ಆಡುವ ಸಾಧ್ಯತೆಯಿದೆ.
ಮೊದಲ ಟೆಸ್ಟ್ ಗೆ ಮುಂಚಿತವಾಗಿ ನಡೆದ ತರಬೇತಿ ಪಂದ್ಯಗಳಲ್ಲಿ ಎರಡು ಸರಣಿ ಅರ್ಧಶತಕ ಗಳಿಸಿದ್ದ ರಾಹುಲ್ ಅವರನ್ನು ಆಯ್ಕೆ ಮಾಡುವ ಸೂಚನೆ ನೀಡಿದ್ದಾರೆ ನಾಯಕ ವಿರಾಟ್ ಕೊಹ್ಲಿ.
"ರಾಹುಲ್ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಅವರು ತರಬೇತಿ ಪಂದ್ಯಗಳಲ್ಲಿ, ಜಿಂಬಾಬ್ವೆ ವಿರುದ್ಧ ಪಂದ್ಯಗಳಲ್ಲಿ ಹಾಗು ಐ ಪಿ ಎಲ್ ನಲ್ಲಿ ಬಹಳ ರನ್ ದಾಖಲಿಸಿದ್ದಾರೆ. ಅವರ ಫಾರ್ಮ್ ಆತ್ಮವಿಶ್ವಾಸ ಹೆಚ್ಚಿಸಿದೆ. ಕಳೆದ ವರ್ಷ ಅವರು ಶ್ರೀಲಂಕಾ ಪ್ರವಾಸದಲ್ಲಿ ಶತಕ ಗಳಿಸಿದ್ದರು ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಿರಲಿಲ್ಲ" ಎಂದು ಪಂದ್ಯಕ್ಕೂ ಮುಂಚಿತವಾಗಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಹುಲ್ ತಂಡದೊಳಕ್ಕೆ ಬರುವುದಲ್ಲದೆ, ಬೌಲಿಂಗ್ ನಲ್ಲಿಯೂ ಬದಲಾವಣೆ ಸಾಧ್ಯತೆ ಇದೆ. ಈ ಪಿಚ್ ವೇಗದ ಬೌಲರ್ಸ್ ಗೆ ಸಹಕರಿಸಲಿದ್ದು ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಜಾಗಕ್ಕೆ ಭುವನೇಶ್ವರ್ ಕುಮಾರ್ ಅಥವಾ ಸ್ಟುವರ್ಟ್ ಬಿನ್ನಿ ಬರುವ ಸಾಧ್ಯತೆ ಇದೆ.