ಪ್ಯಾರಿಸ್: ವಿಶ್ವದ ನಂಬರ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ರನ್ನು ಅವರ ಅಭಿಮಾನಿ ಎಂದು ಕರೆದುಕೊಳ್ಳುವ ಫ್ರೆಂಚ್ ನ ಮುಗುರುಜಾ ಅವರು ಸೋಲಿಸುವ ಮೂಲಕ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಂ ಗೆದ್ದಿದ್ದಾರೆ.
ಸೆರೇನಾ ವಿಲಿಯಮ್ಸ್‌ರನ್ನು ಆದರ್ಶವಾಗಿಟ್ಟುಕೊಂಡು ಟೆನಿಸ್ ಆಡಲು ಆರಂಭಿಸಿದ್ದ ಸ್ಪೇನ್ 22 ವರ್ಷದ ಚೆಲುವೆ ಗಾರ್ಬಿನ್ ಮುಗುರುಜಾ, ಶನಿವಾರ ತನ್ನ ಫೇವರಿಟ್ ಆಟಗಾರ್ತಿಯನ್ನೇ ಮಣಿಸಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದಾರೆ. ಶನಿವಾರ ನಡೆದ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ರನ್ನು 7 -5, 6-4ರಿಂದ ಸೋಲಿಸಿದರು. ಆ ಮೂಲಕ ತಮ್ಮ ಚೊಚ್ಚಲ ಪ್ರಶಸ್ತಿಗೆ ಮುಗರುಜಾ ಮುತ್ತಿಟ್ಟಿರು.
ರೋಲ್ಯಾಂಡ್ ಗ್ಯಾರಸ್‌ನ ಫಿಲಿಪ್ ಚಾರ್ಟ್ ರೀರ್ ಕೋರ್ಟ್‌ನಲ್ಲಿ ನಡೆದ ಪ್ರಶಸ್ತಿ ಫೈನಲ್ ನಲ್ಲಿ ಮುಗುರುಜಾ 21 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಅಮೆರಿಕದ ಸೆರೇನಾ ವಿಲಿಯಮ್ಸ್ ರನ್ನು ಸೋಲಿಸಿದರು. ಈ ಸೋಲಿನ ಮೂಲಕ 22ನೇ ಗ್ರಾಂಡ್ ಸ್ಲಾಂ ಗೆದ್ದು ಜರ್ಮನಿಯ ಮಾಜಿ ಆಟಗಾರ್ತಿ ಸ್ಟೆಫಿಗ್ರಾಫ್ ಸಾಧನೆಯನ್ನು ಸರಿಗಟ್ಟುವ ಹಾದಿಯಲ್ಲಿ ಸೆರೇನಾ ಮತ್ತೊಮ್ಮೆ ವಿಫಲರಾದರು. ಕಳೆದ ವಿಂಬಲ್ಡನ್ ಫೈನಲ್‌ನಲ್ಲಿ ಸೆರೇನಾರನ್ನು ಎದುರಿಸಿದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಮುಗುರುಜಾ ಬಲಿಷ್ಠ ಸರ್ವ್‌ಗಳಿಂದ ಮೇಲುಗೈ ಕಂಡರು. ಬಹುತೇಕ ಪಂದ್ಯಗಳಲ್ಲಿ 2ನೇ ಸೆಟ್‌ನಲ್ಲೇ ಪುಟಿದೇಳುತ್ತಿದ್ದ ಸೆರೇನಾ ಇಲ್ಲಿ ಮಾತ್ರ ಅದೇ ನಿರ್ವಹಣೆ ತೋರಲು ವಿಫಲರಾದರು.
ಹೀಗಾಗಿ ಗಾರ್ಬಿನ್ ಮುಗುರುಜಾ ವೃತ್ತಿಜೀವನದ ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟ ಮುಡಿಗೇರಿಸಿಕೊಂಡರು. 2015ರ ವಿಂಬಲ್ಡನ್ ಫೈನ್‌ನಲ್ಲಿ ಇದೇ ಮುಗರುಜಾ ಅವರು ಸೆರೇನಾ ವಿರುದ್ಧ ಸೋತು ರನ್ನರ್‌ಅಪ್ ಆಗಿದ್ದರು.
ಕೊನೆಗೂ ಗೆದ್ದ ಅಭಿಮಾನಿ
ಸೆರೇನಾ ವಿಲಿಯಮ್ಸ್ ಚೊಚ್ಚಲ ಪ್ರತಿಷ್ಠಿತ ಪ್ರಶಸ್ತಿ ಗೆದ್ದಾಗ ವೆನಿಜುವೆಲಾ ಮೂಲದ ಗಾರ್ಬಿನ್ ಮುಗುರುಜಾ ಕೇವಲ 5 ವರ್ಷದವರಾಗಿದ್ದರು. ಮುಗುರುಜಾ ಬಾಲ್ಯದಿಂದಲೇ ಅಮೆರಿಕ ಆಟಗಾರ್ತಿಯ ದೊಡ್ಡ ಅಭಿಮಾನಿಯಾಗಿದ್ದರು ಮತ್ತು ಅವರೆದುರು ಪ್ರಶಸ್ತಿಗಾಗಿ ಆಡಬೇಕೆಂಬ ಕನಸು ಕಳೆದ ವಿಂಬಲ್ಡನ್‌ನಲ್ಲಿ ಈಡೇರಿದ್ದರೆ, ಈಗ ಸ್ಟಾರ್ ಆಟಗಾರ್ತಿಯನ್ನೇ ಮಣಿಸುವ ಮೂಲಕ ಭವಿಷ್ಯದ ಸ್ಟಾರ್ ಎನಿಸಿದ್ದಾರೆ.