ಮುಂಬೈ: ಅಭಿಷೇಕ್ ಬಚ್ಚನ್ ಅವರ 'ಪ್ಲೇಯಿಂಗ್ ಫಾರ್ ಹ್ಯುಮಾನಿಟಿ' ಮತ್ತು ವಿರಾಟ್ ಕೊಹ್ಲಿ ಫೌಂಡೇಶನ್ ಸಂಸ್ಥೆ ಒಟ್ಟಾಗಿ ಕ್ರಿಕೆಟ್ ಸ್ಟಾರ್ಗಳು ಮತ್ತು ಬಾಲಿವುಡ್ ಸ್ಟಾರ್ಗಳ ನಡುವೆ ಜೂನ್ 4ರಂದು ಮುಂಬೈನಲ್ಲಿ 'ಸೆಲೆಬ್ರಿಟಿ ಕ್ಲಾಸಿಕೋ-2016' ಚಾರಿಟಿ ಫುಟ್ಬಾಲ್ ಪಂದ್ಯವನ್ನು ಆಯೋಜಿಸಿತ್ತು.
ಮುಂಬೈನ ಅಂಧೇರಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಈ ಪಂದ್ಯದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು ಭಾಗವಹಿಸಿದ್ದರು. 'ಪ್ಲೇಯಿಂಗ್ ಫಾರ್ ಹ್ಯುಮಾನಿಟಿ' ಮತ್ತು ವಿರಾಟ್ ಕೊಹ್ಲಿ ಫೌಂಡೇಶನ್ ಸಂಸ್ಥೆಗಳು ಇದರಿಂದ ಸಂಗ್ರಹವಾಗುವ ಹಣವನ್ನು ಮಹಾರಾಷ್ಟ್ರದ ಬರ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ನೀಡಲಾಗುತ್ತದೆ.
ವಿರಾಟ್ ಕೊಹ್ಲಿ ನೇತೃತ್ವದ ಫುಟ್ಬಾಲ್ ಟೀಂನಲ್ಲಿ ಮಹೇಂದ್ರ ಸಿಂಗ್ ಧೋನಿ, ಜಹೀರ್ ಖಾನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್ ಸೇರಿದಂತೆ ವಿವಿಧ ಕ್ರಿಕೆಟಿಗರು ಇದ್ದರು.
ಅಭಿಷೇಕ್ ಬಚ್ಚನ್ ನೇತೃತ್ವದ ಬಾಲಿವುಡ್ ಸ್ಟಾರ್ಸ್ಗಳ ತಂಡದಲ್ಲಿ ರಣಬೀರ್ ಕಪೂರ್, ಅರ್ಜುನ್ ಕಪೂರ್, ಆದಿತ್ಯ ರಾಯ್ ಕಪೂರ್, ಶೋಜಿತ್ ಸಿರ್ಕಾರ್ ಸೇರಿದಂತೆ ಹಲವು ನಟರು ಪಾಲ್ಗೊಂಡಿದ್ದರು. .
ರಣಬೀರ್ ಕಪೂರ್ ತಂಡದ ಪರ ಶೂಜಿತ್ ಸಿರ್ಕಾರ್ ಮೊದಲ ಗೋಲು ಗಳಿಸಿದರು. ಎರಡನೇ ಗೋಲನ್ನು ರಣಬೀರ್ಗೆ ಟ್ರೈನರ್ ಆಗಿರುವ ಅಂಟೋನಿಯೋ ಪೆಕೋರಾ ಬಾರಿಸಿದರು. ಇನ್ನು ವಿರಾಟ್ ಕೊಹ್ಲಿ ಆಲ್ ಹಾರ್ಟ್ಸ್ ತಂಡದ ಪರ ಯುವರಾಜ್ ಸಿಂಗ್ ಮತ್ತು ಕೆ.ಎಲ್. ರಾಹುಲ್ ಗೋಲು ಹೊಡೆದರು.
ಇನ್ನೂ ಪಂದ್ಯ ಡ್ರಾ ಆದ ನಂತರ ಮಾತನಾಡಿದ ಅಭಿಷೇಕ್ ಬಚ್ಚನ್ ಕಳೆದ ಬಾರಿ ನಾವು ಒಂದು ಗೋಲಿನಿಂದ ಪರಾಭವಗೊಂಡಿದ್ದೆವು. ರಣಬೀರ್ ತಂಡದ ಎಲ್ಲಾ ಆಟಗಾರರಿಗೂ ಕೃತಜ್ಞತೆ ಅರ್ಪಿಸಿದ ಅಭಿಷೇಕ್ ಇಂಡಿಯನ್ ಕ್ರಿಕೆಟ್ ತಂಡದ ವಿರುದ್ಧ ಆಡಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ಹೇಳಿದರು.
ಶಿವಸೇನೆ ಯುವಘಟಕದ ಅಧ್ಯಕ್ಷ ಆದಿತ್ಯ ಠಾಕ್ರೆ, ಮಹಾರಾಷ್ಟ್ರ ಬರ ಪರಿಹಾರಕ್ಕೆ ಹಣ ಒದಗಿಸಲು ಈ ರೀತಿ ಪಂದ್ಯ ಆಯೋಜಿಸಲು ಐಡಿಯಾ ನೀಡಿದರು ಎಂದು ಅಭಿಷೇಕ್ ಹೇಳಿದ್ದಾರೆ.