ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕಿಡಾಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸಿಡ್ನಿಯ ಒಲಿಂಪಿಕ್ಸ್ ಪಾರ್ಕ್ ನಲ್ಲಿ ಇಂದು ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಲೇಷ್ಯಾದ ಆಟಗಾರ್ತಿ ಜಿನ್ ವೈ ಗೊಹ್ ವಿರುದ್ಧ ಭಾರತದ ಸೈನಾ ನೆಹ್ವಾಲ್ 21-12, 21-14 ನೇರ ಸೆಟ್ ಗಳ ಅಂತರದಲ್ಲಿ ಪಾರಾಭವಗೊಳಿಸಿದರು. ಪಂದ್ಯದ ಆರಂಭದಿಂದಲೂ ಮಲೇಷ್ಯಾದ ಆಟಗಾರ್ತಿ ವಿರುದ್ಧ ಅಕ್ರಮಣಕಾರಿ ಆಟಕ್ಕೆ ಮೊರೆ ಹೋಗಿದ್ದ ಸೈನಾ, ಸುಲಭವಾಗಿ ಮೊದಲ ಸೆಟ್ ಅನ್ನು ಜಯಿಸಿದ್ದರು. ಆದರೆ ಎರಡನೇ ಸೆಟ್ ನಲ್ಲಿ ಮಲೇಷ್ಯನ್ ಆಟಗಾರ್ತಿ ಸೈನಾಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರಾದರೂ, ಉತ್ತಮ ಫಾರ್ಮ್ ನಲ್ಲಿರುವ ಸೈನಾ ಯಾವುದೇ ಸಂದರ್ಭದಲ್ಲಿಯೂ ತಮ್ಮ ಹಿಡಿತ ಬಿಟ್ಟುಕೊಡಲಿಲ್ಲ. ಅಂತಿಮವಾಗಿ ಸೈನಾ ಜಿನ್ ವೈ ಗೊಹ್ ವಿರುದ್ಧ 21-12, 21-14 ನೇರ ಸೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಕ್ವಾರ್ಟರ್ ಫೈನಲ್ ನಲ್ಲಿ ಸೈನಾ ವಿಶ್ವದ ನಂಬರ್ 2 ಸ್ಥಾನದಲ್ಲಿರುವ ರ್ಯಾಟ್ಚನೋಕ್ ಇಂಟಾನಾನ್ ಅವರ ವಿರುದ್ಧ ಸೆಣಸಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಇತ್ತೀಚೆಗಷ್ಟೇ ಬ್ಯಾಡ್ಮಿಂಟನ್ ನಲ್ಲಿ ಒಂದು ಸ್ಥಾನ ಕೆಳಕ್ಕೆ ಕುಸಿದಿದ್ದ ಕಿಡಾಂಬಿ ಶ್ರೀಕಾಂತ್ ಅವರು ಇಂಡೋನೇಷ್ಯಾದ ಸೋನಿ ಡ್ವಿಕುನ್ಕೊರೋ ವಿರುದ್ಧ 4-6, 13-15 ನೇರ ಸೆಟ್ ಗಳ ಅಂತರದ ಜಯ ದಾಖಲಿಸಿ, ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಈ ಹಿಂದಿನ ಹಲವು ಸರಣಿಗಳಲ್ಲಿ ನಿರಾಶಾದಾಯಕ ಆರಂಭ ಕಂಡಿದ್ದ ಶ್ರೀಕಾಂತ್ ಈ ಭಾರಿ ಆಸ್ಟ್ರೇಲಿಯನ್ ಓಪನ್ ನಲ್ಲಿ ಉತ್ತಮ ಆರಂಭ ಪಡೆದು ತಮ್ಮ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.