ನವದೆಹಲಿ: ಭಾರತದಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಪೂರ್ಣ ಭದ್ರತೆ ನೀಡಲು ಭಾರತ ಸಿದ್ಧವಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿದೆ.
ಪಾಕಿಸ್ತಾನ ತಂಡಕ್ಕೆ ಪೂರ್ಣ ಭದ್ರತೆ ನೀಡದಿದ್ದರೆ ಮತ್ತು ತಮ್ಮ ತಂಡ ಭಾಗವಹಿಸುವ ಬಗ್ಗೆ ಬಹಿರಂಗ ಹೇಳಿಕೆ ನೀಡದಿದ್ದರೆ ವಿಶ್ವ ಟ್ವೆಂಟಿ 20 ಪಂದ್ಯಾವಳಿಯಿಂದ ಹೊರಗುಳಿಯುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿತ್ತು.
ಈ ಹಿನ್ನಲೆಯಲ್ಲಿ ಭಾರತ ಪಾಕಿಸ್ತಾನ ತಂಡಕ್ಕೆ ಪೂರ್ಣ ಭದ್ರತೆ ನೀಡಲು ಸಿದ್ಧವಿದೆ ಎಂದು ಬಿಸಿಸಿಐ ತಿಳಿಸಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಮುಖ್ಯಸ್ಥ ಶಹರ್ಯಾರ್ ಖಾನ್ ಮಾತ್ರ, ನಮಗೆ ಭದ್ರತೆ ನೀಡುವುದರ ಬಗ್ಗೆ ಲಿಖಿತ ರೂಪದಲ್ಲಿ ನೀಡಬೇಕು ಎಂದು ಬಿಸಿಸಿಐ ಮತ್ತು ಭಾರತ ಸರ್ಕಾರಕ್ಕೆ ತಿಳಿಸಿದ್ದಾರೆ.
ಬಿಸಿಸಿಐನ ಹಿರಿಯ ಅಧಿಕಾರಿ ಮತ್ತು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು, ಪಾಕಿಸ್ತಾನದ ಕ್ರಿಕೆಟ್ ತಂಡ ಸೇರಿದಂತೆ ಎಲ್ಲಾ ತಂಡಗಳಿಗೂ ಪೂರ್ಣ ಭದ್ರತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಭದ್ರತೆ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳು ಚಿಂತಿಸಬೇಕಿಲ್ಲ. ಪಾಕ್ ತಂಡವನ್ನು ಸುರಕ್ಷಿತವಾಗಿ ಭಾರತ ನೋಡಿಕೊಳ್ಳಲಿದೆ. ಆದರೆ, ಪಂದ್ಯಾವಳಿಯಲ್ಲಿ ಭಾಗವಹಿಸಬೇಕೋ ಅಥವಾ ಬೇಡವೋ ಎಂಬುದು ಪಿಸಿಬಿಗೆ ಬಿಟ್ಟ ನಿರ್ಧಾರ. ಭದ್ರತೆ ಭರವಸೆ ನಾವು ನೀಡಿದ್ದೇವೆ. ಭಾಗವಹಿಸುವುದು ಬಿಡುವುದು ಅವರಿಷ್ಟ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನವನ್ನು ಸ್ವಾಗತಿಸಲು ತಾವು ಸಿದ್ದವಾಗಿರುವುದಾಗಿಯೂ ಮತ್ತು ತಂಡಕ್ಕೆ ಪೂರ್ಣ ಭದ್ರತೆ ನೀಡುವುದಾಗಿ ಸಾರ್ವಜನಿಕ ಹೇಳಿಕೆ ನೀಡಬೇಕು ಎಂದು ಶಹರ್‌ಯಾರ್ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics