ಕ್ರೀಡೆ

ಮೆಡಲ್ಸ್, ಪ್ರಶಸ್ತಿಗಳನ್ನು ಹರಾಜಿಗಿಟ್ಟ ಫುಟ್ ಬಾಲ್ ಲೆಜೆಂಡ್ ಪೀಲೆ

Srinivasamurthy VN

ರಿಯೋ ಡಿ ಜನೈರೋ: ಫುಟ್​ಬಾಲ್ ದಿಗ್ಗಜ ಮತ್ತು ಬ್ರೆಜಿಲ್​ನ ಶ್ರೇಷ್ಠ ಆಟಗಾರ ಪಿಲೆ ತಮ್ಮ ಬಳಿ ಇರುವ ಪದಕ, ಟ್ರೋಫಿ ಮತ್ತು ವೃತ್ತಿ ಜೀವನದ 1000ನೇ ಗೋಲು ಗಳಿಕೆಗೆ ಸಿಕ್ಕ  ಪುರಸ್ಕಾರಗಳನ್ನು ಹಾರಾಜಿಗಿಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಬ್ರೆಜಿಲ್​ನ ಕ್ಯುರಿಟಿಬಾ ನಗರದಲ್ಲಿರುವ ಪೆಕ್ವಿನೋ ಪ್ರಿನ್ಸಿಪೆ ಮಕ್ಕಳ ಆಸ್ಪತ್ರೆಗೆ ದೇಣಿಗೆ ನೀಡುವ ಉದ್ದೇಶದಿಂದ ಪೀಲೆ ಈ ಹರಾಜು ಪ್ರಕ್ರಿಯೆ ನಡೆಸುತ್ತಿದ್ದು, ತಮ್ಮ ಬಳಿ  ಇರುವ ಪದಕ, ಟ್ರೋಫಿ ಮತ್ತು ವೃತ್ತಿ ಜೀವನದ 1000ನೇ ಗೋಲು ಗಳಿಕೆಗೆ ಸಿಕ್ಕ ಪುರಸ್ಕಾರಗಳು ಸೇರಿದಂತೆ ಸುಮಾರು 2 ಸಾವಿರ ವಸ್ತುಗಳನ್ನು ಹರಾಜಿಗೆ ಇಡುತ್ತಿದ್ದಾರೆ ಎಂದು  ಹೇಳಲಾಗುತ್ತಿದೆ. ಬ್ರೆಜಿಲ್ ತಂಡದ ಪರ ಆಡಿ ಗೆದ್ದುಕೊಂಡ ಮೂರು ವಿಶ್ವಕಪ್ ಪದಕಗಳೂ (1958, 1962, 1970) ಕೂಡ ಈ ಪಟ್ಟಿಯಲ್ಲಿ ಸೇರಿವೆ ಎಂದು ತಿಳಿದುಬಂದಿದೆ.

ಹರಾಜು ಪ್ರಕ್ರಿಯೆ ಮುಂಬರುವ ಜೂನ್ 7ರಿಂದ 9ರ ತನಕ ಲಂಡನ್​ನಲ್ಲಿ ನಡೆಯಲಿದ್ದು, ಲಾಸ್ ಏಂಜಲಿಸ್ ಮೂಲದ ಕಂಪನಿ ‘ಜುಲಿಯನ್ ಆಕ್ಷನ್ಸ್’ ಹರಾಜಿನ ಉಸ್ತುವಾರಿ ವಹಿಸಿಕೊಂಡಿದೆ  ಎಂದು ಪೀಲೆ ಸಲಹೆಗಾರ ಜೋಸ್ ಫಾರ್​ನೋಸ್ ರೋಡ್ರಿಗೀಸ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ಪೀಲೆ ಒಂದು ರೀತಿಯಲ್ಲಿ ಕ್ರೀಡಾ ಕ್ಷೇತ್ರದ ಮರ್ಲಿನ್ ಮನ್ರೋ ಇದ್ದಂತೆ. ಫುಟ್ ಬಾಲ್ ಕ್ರೀಡೆಗೆ ಪೀಲೆ ಅತ್ಯುತ್ತಮ ರಾಯಭಾರಿಯಾಗಿದ್ದಾರೆ ಎಂದು ಜುಲಿಯನ್ ಆಕ್ಷನ್ಸ್ ಸಂಸ್ಥೆಯ  ಕಾರ್ಯನಿರ್ವಾಹಕ ನಿರ್ದೇಶಕ ಮಾರ್ಟಿನ್ ನೋಲನ್ ಹೇಳಿದ್ದಾರೆ.

ತಮ್ಮ ಬಳಿ ಇರುವ ಅತ್ಯಮೂಲ್ಯವಾದ ಪ್ರಶಸ್ತಿಗಳನ್ನು ಪೀಲೆ ಹರಾಜಿಗಿಟ್ಟು ಅದರಿಂದ ಬಂದ ಹಣವನ್ನು ಸಾಮಾಜಿಕತ ಕಾರ್ಯಕ್ಕಾಗಿ  ತೊಡಗಿಸುತ್ತಿರುವ ಅವರ ಕಾರ್ಯಕ್ಕೆ  ಕ್ರೀಡಾಕ್ಷೇತ್ರದಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.

SCROLL FOR NEXT