ನವದೆಹಲಿ: ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ನಿರ್ದೇಶಕ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಸಿಸಿಐ ಗೆ ಪತ್ರ ಬರೆದಿದ್ದು ವಿಜಯ್ ಮಲ್ಯ ಅವರ ರಾಜೀನಾಮೆಯನ್ನು ಸ್ಪಷ್ಟಡಿಸಿದೆ.
ಬಿಸಿಸಿಐ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಆರ್ ಸಿಬಿ ಪ್ರಾಂಚೈಸಿಯ ಮಾಲಿಕತ್ವದ ಬಗ್ಗೆ ಆರ್ ಸಿಬಿಯ ಅಧಿಕಾರಿ ರಸ್ಸೆಲ್ ಆಡಮ್ಸ್ ನಿಂದ ಐಪಿಎಲ್ ಆಡಳಿತ ಮಂಡಳಿಗೆ ಮಾರ್ಚ್.7 ರಂದು ಇ-ಮೇಲ್ ಹೋಗಿದ್ದು ಪ್ರಾಂಚೈಸಿಯ ನಿರ್ದೇಶಕ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಜಯ್ ಮಲ್ಯ ರಾಜೀನಾಮೆ ನೀಡಿರುವುದರಿಂದ ಆರ್ ಸಿಬಿಯ ಮುಖ್ಯ ಉಸ್ತುವಾರಿಯಾಗಿ ರಸ್ಸೆಲ್ ಆಡಮ್ಸ್ ಕಾರ್ಯನಿರ್ವಹಿಸಲಿದ್ದಾರೆ. ವಿಜಯ್ ಮಲ್ಯ ಆರ್ ಸಿಬಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಲ್ಯ ಅವರ ಪುತ್ರ ಸಿದ್ಧಾರ್ಥ್ ಮಲ್ಯ ನಿರ್ದೇಶಕರ ಮಂಡಳಿಯಲ್ಲಿರುವವರೆಗೂ ವಿಜಯ್ ಮಲ್ಯ ಗೌರವ ಮುಖ್ಯ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ ಎಂದು ರಸ್ಸೆಲ್ ಆಡಮ್ಸ್ ಕಳಿಸಿರುವ ಇ-ಮೇಲ್ ನಲ್ಲಿ ತಿಳಿಸಲಾಗಿದೆ. ಬ್ಯಾಂಕ್ ನಿಂದ ಪಡೆದಿರುವ ಸಾಲ ವಾಪಸ್ ನೀಡಲಾಗದೇ ಸುಸ್ತಿದಾರರಾಗಿರುವ ವಿಜಯ್ ಮಲ್ಯ ಲಂಡನ್ ಗೆ ತೆರಳಿದ ನಂತರ ಆರ್ ಸಿಬಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.