ಕ್ರೀಡೆ

ಕಿತ್ತುಹೋದ ಸಿಮೆಂಟ್ ಕಟ್ಟೆ ಮೇಲೆ ಬೋಲ್ಟ್ ತರಬೇತಿ: ವೈರಲ್ ಆಯ್ತು ವಿಡಿಯೋ

Srinivasamurthy VN

ಜಮೈಕಾ: ತ್ರಿವಳಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಮೈಕಾದ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್ ಅವರ ತರಬೇತಿ ವಿಡಿಯೋವೊಂದು ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಅವರು ಇತ್ತೀಚೆಗೆ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದ ತಮ್ಮ ತರಬೇತಿ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು  ಈ ವರೆಗೂ ಸುಮಾರು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬೋಲ್ಟ್ ಕಳೆದ ಮೂರು ಒಲಿಂಪಿಕ್ಸ್ ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದು ಚಾಂಪಿಯನ್ ಆಗಿದ್ದು, ಈ ಚಾಂಪಿಯನ್ ಆಟಗಾರ ಹೇಗೆ ತರಬೇತಿ  ನಡೆಸುತ್ತಾರೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲ ಕ್ರೀಡಾ ಪ್ರೇಮಿಗಳಲ್ಲಿ ಮನೆ ಮಾಡಿತ್ತು. ಮೂರು ಬಾರಿ ಚಿನ್ನದ ಪದಕ ಗೆಲ್ಲಲು ಬೋಲ್ಟ್ ಇನ್ಯಾವ ಉನ್ನತ ಮಟ್ಟದ ಕ್ರೀಡಾಂಗಣದಲ್ಲಿ ತರಬೇತಿ ನಡೆಸಿರಬಹುದು ಎಂಬ  ಕುತೂಹಲಕ್ಕೆ ಸ್ವತಃ ಬೋಲ್ಟ್ ತೆರೆ ಎಳೆದಿದ್ದು, ತಮ್ಮ ತರಬೇತಿ ಕುರಿತ ಪುಟ್ಟ ವಿಡಿಯೋವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ.

ಕ್ರೀಡಾಂಗಣದ ಒಂದು ಭಾಗದಲ್ಲಿ ಕಿತ್ತುಹೋದ ಸಿಮೆಂಟ್ ಗೋಡೆಯ ಬಳಿ ಬೋಲ್ಟ್ ತರಬೇತಿ ನಡೆಸುತ್ತಿದ್ದು, ಈ ವಿಡಿಯೋ ನೋಡಿ ಕ್ರೀಡಾ ಪ್ರೇಮಿಗಳು ನಿಜಕ್ಕೂ ಅಚ್ಚರಿಗೊಂಡಿದ್ದಾರೆ. ಇಂತಹ ಕಳಪೆ ಕ್ರೀಡಾಂಗಣದಲ್ಲಿ ಬೋಲ್ಟ್  ತರಬೇತಿ ನಡೆಸುತ್ತಾರೆಯೇ ಎಂದು ಕೆಲ ಕ್ರೀಡಾ ಪ್ರೇಮಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಇನ್ನು 2017ರಲ್ಲಿ ಲಂಡನ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಬಳಿಕ ಬೋಲ್ಟ್ ವಿದಾಯ ಹೇಳುತ್ತಿದ್ದು, ಇದೇ ಕಾರಣಕ್ಕೆ 2017ರ ಲಂಡನ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಎಲ್ಲ ವಿಭಾಗದಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ  ತಮ್ಮ ವಿದಾಯವನ್ನು ಸ್ಮರಣೀಯವಾಗಿಸಿಕೊಳ್ಳಲು ಬೋಲ್ಟ್ ಸಜ್ಜಾಗುತ್ತಿದ್ದಾರೆ. ಈ ಕುರಿತು ತರಬೇತಿ ಆರಂಭಿಸಿರುವ ಬೋಲ್ಟ್ ಮಿಷನ್ 2017ಕ್ಕೆ ಸಿದ್ಧನಾಗುತ್ತಿದ್ದೇನೆ ಎಂದು ಹೇಳಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

SCROLL FOR NEXT