ರೋಹ್ಟಕ್: ರಿಯೋ ಓಲಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಭಾವಿ ಪತಿಯ ಹೆಸರನ್ನು ಬಹಿರಂಗ ಪಡಿಸಿದ್ದಾರೆ.
ಕಳೆದ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ಸತ್ಯವ್ರತ್ ಅವರನ್ನು ಸಾಕ್ಷಿ ವಿವಾಹವಾಗುತ್ತಿರುವುದಾಗಿ ಸಾಕ್ಷಿ ಸಹೋದರ ಸಚಿನ್ ಹೇಳಿದ್ದಾರೆ.
23 ವರ್ಷದ ಸಾಕ್ಷಿ ತಮಗಿಂತ ಎರಡು ವರ್ಷ ಚಿಕ್ಕವನಾಗಿರುವ ತಮ್ಮದೇ ರಾಜ್ಯದ ಕುಸ್ತಿಪಟು ಸತ್ಯವ್ರತ್ ಕಾದಿಯಾನ್ ಅವರನ್ನು ಕಳೆದ ಹಲವು ದಿನಗಳಿಂದ ಪ್ರೀತಿಸುತ್ತಿದ್ದಾರೆ. ಸಾಕ್ಷಿ ಮತ್ತು ಸತ್ಯವ್ರತ್ ಒಂದೇ ಕುಸ್ತಿ ಶಾಲೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾಗ ಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ಪ್ರೀತಿಯಾಗಿ ಬದಲಾಗಿದೆ.
ಸತ್ಯವ್ರತ್ ತಂದೆ ಸತ್ಯವಾನ್ ಹರಿಯಾಣಾದ ರೋಹ್ಟಕ್ ಜಿಲ್ಲೆಯಲ್ಲಿ ಕುಸ್ತಿ ಶಾಲೆಯನ್ನು ನಡೆಸುತ್ತಿದ್ದಾರೆ. ಅವರು ಸಹ ತಮ್ಮ ಮಗ ಸಾಕ್ಷಿ ಜತೆ ಸಪ್ತಪದಿ ತುಳಿಯಲಿರುವುದನ್ನು ದೃಢೀಕರಿಸಿದ್ದಾರೆ.
2014ರ ಕಾಮನ್‌ವೆಲ್ತ್ ಟೂರ್ನಿಯಲ್ಲಿ ರಜತ ಪದಕ ಗೆದ್ದಿದ್ದ ಸತ್ಯವ್ರಚ್ ಅದೇ ವರ್ಷ ಏಶಿಯನ್ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.