ಕ್ರೀಡೆ

ಜಾಕೋವಿಚ್ ಗೆ ಆಘಾತ ನೀಡಿದ ಸ್ಟಾನ್ ವಾವ್ರಿಂಕಾ ಮುಡಿಗೆ ಯುಎಸ್ ಓಪನ್ ಚಾಂಪಿಯನ್ ಗರಿ

Srinivasamurthy VN

ನ್ಯೂಯಾರ್ಕ್: ಸ್ವಿಟ್ಜರ್ಲೆಂಡ್ ಮೂಲದ ಸ್ಟಾನ್ ವಾವ್ರಿಂಕಾ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಸರ್ಬಿಯಾ ಮೂಲದ ನೊವಾಕ್ ಜಾಕೋವಿಚ್ ರನ್ನು ಮಣಿಸುವ ಮೂಲಕ 2016ನೇ ಸಾಲಿನ  ಯುಎಸ್ ಓಪನ್ ಚಾಂಪಿಯನ್ ಶಿಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ.

ನ್ಯೂಯಾರ್ಕ್ ನಲ್ಲಿ ಭಾನುವಾರ ರಾತ್ರಿ ನಡೆದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಸ್ಟಾನ್ ವಾವ್ರಿಂಕಾ ಸರ್ಬಿಯಾ ಮೂಲದ ನಂ. 1 ಆಟಗಾರ ಹಾಗೂ ಹಾಲಿ  ಚಾಂಪಿಯನ್‌‌ ನೋವಾಕ್‌ ಜೋಕೋವಿಕ್‌ ಅವರನ್ನು ಮಣಿಸಿ ಈ ಸಾಧನೆಗೈದಿದ್ದಾರೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ವಾವ್ರಿಂಕಾ ಅವರು ನೋವಾಕ್‌ ಜೋಕೋವಿಕ್‌ ವಿರುದ್ಧ 6-7 (1), 6-4, 7-5, 6-3 ಸೆಟ್‌ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಈ ಮೂಲಕ ವಾವ್ರಿಂಕಾ ವೃತ್ತಿ ಜೀವನದ ಮೊದಲ ಯುಎಸ್ ಓಪನ್ ಹಾಗೂ ಮೂರನೇ ಗ್ರಾಂಡ್‌ಸ್ಲಾಂ ಪ್ರಶಸ್ತಿ  ಗೆದ್ದ ಸಾಧನೆಗೆ ಪಾತ್ರರಾಗಿದ್ದಾರೆ.  

ಅಲ್ಲದೆ 31 ವರ್ಷ ವಯಸ್ಸಿನ ಸ್ಟಾನ್‌‌ ವಾವ್ರಿಂಕಾ ಅಮೆರಿಕನ್‌ ಓಪನ್‌ ಗ್ರಾಂಡ್‌ಸ್ಲಾಂ ಪ್ರಶಸ್ತಿ ಗೆದ್ದ ಎರಡನೇ ಅತಿ ಹಿರಿಯ ಆಟಗಾರರಾಗಿದ್ದಾರೆ. ಈ ಹಿಂದೆ 1970ರಲ್ಲಿ 35ರ ಹರೆಯದಲ್ಲಿ ಕೆನ್‌‌  ರೊಸ್‌ವಲ್‌‌ ಅಮೆರಿಕನ್‌ ಗ್ರಾಂಡ್‌ಸ್ಲಾಮ್‌ ಗೆದ್ದ ಅತಿ ಹಿರಿಯ ವ್ಯಕ್ತಿ ಎನಿಸಿದ್ದರು.

ಬರೊಬ್ಬರಿ ನಾಲ್ಕು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಫೈನಲ್ ಪಂದ್ಯದಲ್ಲಿ ಜಯಲಕ್ಷ್ಮಿ ವಾವ್ರಿಂಕಾ ಹಾಗೂ ಜಾಕೋವಿಚ್ ಪರ ವಾಲುತ್ತಿತ್ತು. ಅಂತಿಮವಾಗಿ ವಾವ್ರಿಂಕಾ 6-7 (1/7), 6-4, 7-5,  6-3 ಅಂತರದಲ್ಲಿ ಜಯ ದಾಖಲಿಸುವ ಮೂಲಕ ತಮ್ಮ ಮೊದಲ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟರು.

SCROLL FOR NEXT