ಚೆನ್ನೈ: ಭಾರತೀಯ ಪುರುಷರ ವಿಭಾಗದ ಡಬಲ್ಸ್ ವಿಭಾಗದಲ್ಲಿ ಪರಾಭವಗೊಂಡ ನಂತರ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ನಿವೃತ್ತಿಯ ವದಂತಿಗಳನ್ನು ತಳ್ಳಿಹಾಕಿದ್ದು, ನಿವೃತ್ತಿ ಪಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಹಿರಿಯ ಟೆನಿಸ್ ಆಟಗಾರರಾದ ಸೋಮ್ ದೇವ್ ಹಾಗೂ ಸರ್ಬಿಯಾದ ಅನಾ ಇವಾನೋವಿಕ್ ಸಹ ನಿವೃತ್ತಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಲಿಯಾಂಡರ್ ಪೇಸ್ ಸಹ ಇದೇ ಹಾದಿಯಲ್ಲಿ ಸಾಗಲಿದ್ದು ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಲಿಯಾಂಡರ್ ಪೇಸ್ ವಿವಾದಗಳಿಗೆ ತೆರೆ ಎಳೆದಿದ್ದು, ನಿವೃತ್ತಿ ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮ್ ದೇವ್ ಅವರ ನಿವೃತ್ತಿಯ ಬಗ್ಗೆ ಪ್ರತಿಕ್ರಿಯೆ ಕೇಳಿದ್ದ ಮಾಧ್ಯಮಗಳು ನನ್ನ ನಿವೃತ್ತಿಯ ಬಗ್ಗೆಯೂ ಪ್ರಶ್ನಿಸಿದ್ದವು, ಮಾಧ್ಯಮಗಳಿಗೆ ಉತ್ತರಿಸುತ್ತಾ, ನಾನು ಇಂದು, ಮುಂದಿನ 6 ತಿಂಗಳು ಅಥವಾ ಅದಕ್ಕಿಂತ ತಡವಾಗಿ ನಿವೃತ್ತಿ ಪಡೆಯಬಹುದು ಎಂದಷ್ಟೇ ಹೇಳಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಲಿಯಾಂಡರ್ ಪೇಸ್ ಹೇಳಿದ್ದಾರೆ.
ಟೆನಿಸ್ ಬಗ್ಗೆ ನನಗೆ ಆಸಕ್ತಿ ಇದ್ದು, ಟೆನೀಸ್ ಆಟವನ್ನು ಮುಂದುವರೆಸುತ್ತೇನೆ, ನನ್ನ ಸಹ ಆಟಗಾರ ಆಂಡ್ರೆ ಸಾ ಅವರನ್ನೂ ಉತ್ತೇಜಿಸುವ ಮೂಲಕ ಗ್ರಾಂಡ್ ಸ್ಲ್ಯಾಮ್ ನ್ನು ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ಲಿಯಾಂಡರ್ ಪೇಸ್ ತಿಳಿಸಿದ್ದಾರೆ.