ಜ್ಯೂರಿಚ್: 2026ರ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚುವರಿಯಾಗಿ 16 ದೇಶಗಳು ಭಾಗವಹಿಸುತ್ತಿದ್ದು, ಒಟ್ಟು 48 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಜಿಯಾನಿ ಇನ್ಫೆಂಟೀನೋ ಅವರು ಹೇಳಿದ್ದಾರೆ.
ಈಗಾಗಲೇ ನಿಗದಿಯಾಗಿರುವ 2018ರ ರಷ್ಯಾ ವಿಶ್ವಕಪ್ ಹಾಗೂ 2022ರ ವಿಶ್ವಕಪ್ ಪಂದ್ಯಾವಳಿಗಳಲ್ಲಿ 32 ತಂಡಗಳು ಭಾಗವಹಿಸುತ್ತಿದ್ದು, 2026ಕ್ಕೆ ಹೆಚ್ಚುವರಿಯಾಗಿ 16 ತಂಡಗಳಿಗೆ ಅವಕಾಶ ನೀಡಲು ಫಿಫಾ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ಜಿಯಾನಿ ತಿಳಿಸಿದ್ದಾರೆ.
ಪ್ರಸ್ತುತ 64 ಹಣಾಹಣಿಗಳು ನಡೆಯುತ್ತಿದ್ದು, 2026ರ ವೇಳೆಗೆ ತಂಡಗಳ ಸಂಖ್ಯೆಯನ್ನು 48ಕ್ಕೆ ಹೆಚ್ಚಿಸಲು ಫಿಫಾ ಅನುಮತಿ ನೀಡಿರುವುದರಿಂದ ಒಟ್ಟು ಹಣಾಹಣಿಗಳ ಸಂಖ್ಯೆಯೂ 80ಕ್ಕೆ ಏರಿಕೆಯಾಗಲಿದ್ದು, ಇದರಿಂದ ಸುಮಾರು 1 ಬಿಲಿಯನ್ ಡಾಲರ್ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಪ್ರತೀ ತಂಡಕ್ಕೆ ಗರಿಷ್ಠ 7 ಪಂದ್ಯಗಳನ್ನಾಡುವ ಅವಕಾಶ ಲಭಿಸಲಿದೆ ಎಂದು ಜಿಯಾನಿ ಹೇಳಿದ್ದಾರೆ.