ಇಂದು ಹೈದರಾಬಾದಿನಲ್ಲಿ ನಾಮಪತ್ರ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೊಹಮ್ಮದ್ ಅಜರುದ್ದೀನ್
ಹೈದರಾಬಾದ್: ಲೋಧಾ ಸಮಿತಿ ಸುಧಾರಣೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸ್ಥಾನಿಕ ಅಧಿಕಾರಿ ಅರ್ಶದ್ ಆಯೂಬ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಭಾರತೀಯ ಕ್ರಿಕೆಟ್ ತಂಡವನ್ನು ಅತಿ ದೀರ್ಘಕಾಲದವರೆಗೆ ಮುನ್ನೆಡೆಸಿದ ಮತ್ತು ಮೂರು ವಿಶ್ವಕಪ್(1992, 1996, 1999)ಗಳನ್ನು ತಮ್ಮ ನಾಯಕತ್ವದಲ್ಲಿ ಅತ್ಯುತ್ತಮವಾಗಿ ಮುನ್ನಡೆಸಿದ ಮೊಹಮ್ಮದ್ ಅಜರುದ್ದೀನ್ ಅವರು 2000ದಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಅಕ್ರಮವಾಗಿ ಭಾಗಿಯಾದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಸಿಸಿಐನಿಂದ ಜೀವಾವಧಿ ನಿಷೇಧಕ್ಕೊಳಪಟ್ಟಿದ್ದರು.
ಇಂದು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದಿನಲ್ಲಿ ಕ್ರಿಕೆಟ್ ಗೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿಲ್ಲ. ರಣಜಿಯಲ್ಲಿ ನಾವು ಕೊನೆಯವರಿಂದ ಎರಡನೇ ಸ್ಥಾನದಲ್ಲಿದ್ದೇವೆ. ಹೈದರಾಬಾದಿನಲ್ಲಿ ಕ್ರಿಕೆಟ್ ಆಟ ಬೆಳೆಯಬೇಕೆಂಬುದು ನನ್ನ ಮೂಲ ಉದ್ದೇಶ. ಕ್ರಿಕೆಟ್ ಗೆ ಒಳ್ಳೆಯದನ್ನು ಮಾಡಬೇಕೆಂದು ಬಯಸಿದ್ದೇನೆ. ವೈಯಕ್ತಿಕ ಜನರ ಭ್ರಮೆಗಳಿಂದ ನಾವು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅನೇಕ ಮಂದಿ ಉತ್ತಮ ಕಠಿಣ ಶ್ರಮ ಹಾಕುವ ಆಟಗಾರರು ಜಿಲ್ಲಾ ಮಟ್ಟದಿಂದ ಬಂದಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ನ್ನು ಅಭಿವೃದ್ಧಿಪಡಿಸಬೇಕು. ನಾವು ಅನೇಕ ದೊಡ್ಡ ದೊಡ್ಡ ಆಟಗಾರರನ್ನು ತಯಾರು ಮಾಡಿದ್ದೆವು. ಆದರೆ ಈಗ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಟಗಾರರ ಕೊರತೆಯಿದೆ. ಕ್ರಿಕೆಟ್ ನ ಬೆಳವಣಿಗೆಗೆ ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂಬುದು ನನ್ನ ಉದ್ದೇಶ ಎಂದು ಪ್ರತಿಕ್ರಿಯೆ ನೀಡಿದರು.
ಅಂದಿನ ಉತ್ತಮ ಬ್ಯಾಟ್ಸ್ ಮನ್ ಅಜರುದ್ದೀನ್ 99 ಟೆಸ್ಟ್ ಗಳನ್ನು ಆಡಿ 6000 ರನ್ ಮತ್ತು 24 ಸೆಂಚುರಿಗಳನ್ನು ಬಾರಿಸಿದ್ದರು. ಅಜರ್ ಯುಪಿಎ-2 ಸರ್ಕಾರದ ಅವಧಿಯಲ್ಲಿ ಮೊರದಾಬಾದ್ ಕ್ಷೇತ್ರದ ಸಂಸದರಾಗಿದ್ದರು, ಆದರೆ 2014ರಲ್ಲಿ ಚುನಾವಣೆಯಲ್ಲಿ ಸೋತಿದ್ದರು.