ಕ್ರೀಡೆ

ಏಷ್ಯನ್ ರೆಸ್ಲಿಂಗ್ ಚಾಂಪಿಯನ್​ಷಿಪ್; ಭಜರಂಗ್ ಪೂನಿಯಾಗೆ ಸ್ವರ್ಣ

Srinivasamurthy VN

ನವದೆಹಲಿ: ಏಷ್ಯನ್ ರೆಸ್ಲಿಂಗ್ ಚಾಂಪಿಯನ್​ ಷಿಪ್​ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಶನಿವಾರ ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಭಜರಂಗ್ ಪೂನಿಯಾ ಸ್ವರ್ಣಸಾಧನೆ ಮಾಡಿದ್ದಾರೆ.

ಫೈನಲ್ ಪಂದ್ಯದಲ್ಲಿ 23 ವರ್ಷದ ಭಜರಂಗ್ ಪೂನಿಯಾ ಕೊರಿಯಾದ ಸೆಂಗಚುಲ್ ಲೀ ವಿರುದ್ಧ 6- 2 ರಿಂದ ಜಯ ಸಾಧಿಸಿದರು. ಈ ಮೂಲಕ ಭಾರತ ಕೂಟದಲ್ಲಿ ಒಂದು ಸ್ವರ್ಣ, 4 ಬೆಳ್ಳಿ ಹಾಗೂ 2 ಕಂಚು ಸೇರಿದಂತೆ ಒಟ್ಟು 7  ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಮೊದಲ ಸುತ್ತಿನ ವಿಭಾಗದಲ್ಲಿ 0-2 ರಿಂದ ಹಿನ್ನಡೆ ಅನುಭವಿಸಿದ್ದ ಭಜರಂಗ್, ಬಳಿಕ ಕೊರಿಯಾದ ಆಟಗಾರನಿಗೆ ತಿರುಗೇಟು ನೀಡುವ ಮೂಲಕ ಎದುರಾಳಿಯನ್ನು  ಮಣಿಸವಲ್ಲಿ ಯಶಸ್ವಿಯಾದರು.

ಲಂಡನ್ ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ್ ದತ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಭಾರತೀಯ ಆಟಗಾರನನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.

ಇನ್ನು ಪಂದ್ಯದ ಬಳಿಕ ಮಾತನಾಡಿದ ಯೋಗೇಶ್ವರ್ ದತ್ ಅವರು, ಪಂದ್ಯಕ್ಕೂ ಮುನ್ನ ಭಜರಂಗ್ ಜತೆ ಮಾತನಾಡಿದ್ದೆ. ರಕ್ಷಣಾತ್ಮಕ ಆಟ ಸುಲಭವಾಗಿದ್ದರೂ, ಪ್ರತಿ ಬಾರಿಯೂ ಆಕ್ರಮಣಕಾರಿಯಾಗಿ ಆಡುವಂತೆ ಹೇಳುತ್ತಿದ್ದೆ.  ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಗೆದ್ದಿರುವುದು ನಿಜಕ್ಕೂ ದೊಡ್ಡ ಸಾಧನೆ ಎಂದು ಹೇಳಿದ್ದಾರೆ.

ಸರಿತಾ ಗೆ ಬೆಳ್ಳಿ
ಮತ್ತೊಂದು ಪಂದ್ಯದಲ್ಲಿ ಭಾರತದ ಸರಿತಾ ಅವರು ಮಹಿಳೆಯರ 58 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳೆಯರ ವಿಭಾಗದಲ್ಲಿ ಸರಿತಾ 0-6 ರಿಂದ ರ್ಕಿಗಿಸ್ತಾನದ ಐಸುಲೂ ಟೈನ್ಬೆಕೊವಾ ವಿರುದ್ಧ  ಹೀನಾಯವಾಗಿ ಸೋತರು.

SCROLL FOR NEXT