ಕೋಲ್ಕತಾ: ತೀವ್ರ ಕುತೂಹಲ ಕೆರಳಿಸಿದ್ದ ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜಯಭೇರಿ ಭಾರಿಸುವ ಮೂಲಕ ಇಂಗ್ಲೆಂಡ್ ತಂಡ ಚೊಚ್ಚಲ ಫೀಫಾ ವಿಶ್ವಕಪ್ ಗೆ ಮುತ್ತಿಟ್ಟಿದೆ.
ಕೋಲ್ಕತಾದ ಸಾಲ್ಟ್ ಲೇಕ್ ನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಲಾಢ್ಯ ಸ್ಪೇನ್ ತಂಡವನ್ನು 5-2 ಅಂತರದಲ್ಲಿ ಬಗ್ಗು ಬಡಿದು ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಮ್ಯಾಂಚೆಸ್ಟರ್ ಸಿಟಿ ಮಿಡ್‌ಫೀಲ್ಡರ್ ಫಿಲ್ ಫೊಡೆನ್ ದಾಖಲಿಸಿದ ಅವಳಿ ಗೆಲುವಿನ ನೆರವಿನಲ್ಲಿ ಇಂಗ್ಲೆಂಡ್ ತಂಡ ಯುರೋಪಿಯನ್ ಚಾಂಪಿಯನ್ ಸ್ಪೇನ್ ಗೆ ಸೋಲಿನ ರುಚಿ ತೋರಿಸಿತು.
ಸ್ಪೇನ್ ತಂಡ ಪಂದ್ಯದ ಮೊದಲಾರ್ಧದಲ್ಲಿಯೇ ಅವಳಿ ಗೋಲು ದಾಖಲಿಸಿ ಮೇಲುಗೈ ಸಾಧಿಸಿತ್ತು. ಬಾರ್ಸಿಲೋನಾದ ಸೆರ್ಗಿಯೊ ಗೋಮೆಝ್ 10 ನೇ ಮತ್ತು 31ನೇ ನಿಮಿಷದಲ್ಲಿ ಅವಳಿ ಗೋಲು ಜಮೆ ಮಾಡಿ ಸ್ಪೇನ್ ಗೆ 2-0 ಮುನ್ನಡೆ ಸಾಧಿಸಲು ನೆರವಾದರು. ಆದರೆ ಪ್ರಥಮಾರ್ಧದ ಕೊನೆಯಲ್ಲಿ ರ್ಯಾನ್ ಬ್ರೆವ್ ಸ್ಟರ್ (44ನೇ ನಿಮಿಷ) ಗೋಲು ಜಮೆ ಮಾಡಿ ಇಂಗ್ಲೆಂಡ್ ನ ಗೋಲಿನ ಖಾತೆ ತೆರೆದರು. ಬಳಿಕ ದ್ವಿತಿಯಾರ್ಧದಲ್ಲಿ ಇಂಗ್ಲೆಂಡ್ ನ ಮಾರ್ಗನ್ ಗಿಬ್ಸ್ ವೈಟ್ 58ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸಮಬಲ ಸಾಧಿಸಿದರು.
ಬಳಿಕ ಫೊಡೆನ್ 69ನೇ ನಿಮಿಷದಲ್ಲಿ ಗೋಲು ಗಳಿಸಿ 3-2 ಮೇಲುಗೈ ಸಾಧಿಸಲು ನೆರವಾದರೆ, ಬಳಿಕ ಮತ್ತೋರ್ವ ಇಂಗ್ಲೆಂಡ್ ಫುಟ್ ಬಾಲ್ ಆಟಗಾರ ಮಾರ್ಕ್ ಗುಯೀ 84ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಈ ಗೋಲಿನ ಕೆಲವೇ ನಿಮಿಷದ ಅಂತರದಲ್ಲಿ ಅಂದರೆ 88ನೇ ನಿಮಿಷದಲ್ಲಿ ಫೊಡೆನ್ ಮತ್ತೊಂದು ಗೋಲು ದಾಖಲಿಸಿ ಇಂಗ್ಲೆಂಡ್ ತಂಡ 5-2 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಲು ನೆರವಾದರು.