ಚೆನ್ನೈ: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಸತತ ಮೂರನೇ ಬಾರಿಗೆ ಪ್ರೊ ಕಬಡ್ಡಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ನಿನ್ನೆ ಚೆನ್ನೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಟ್ನಾ ತಂಡ ಪ್ರಬಲ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು 55-38 ಅಂಕಗಳಿಂದ ಮಣಿಸಿ ಭರ್ಜರಿಯಾಗಿ ಜಯಗಳಿಸಿತು. ಇದು ಪಾಟ್ನಾ ತಂಡಕ್ಕೆ ಸತತ ಮೂರನೇ ಪ್ರಶಸ್ತಿ ಗೆಲುವಾಗಿದ್ದು, ಈ ಹಿಂದೆ ನಡೆದ ಸೀಸನ್ 3 ಮತ್ತು 4ನ್ನೂ ಕೂಡ ಪಾಟ್ನಾ ತಂಡವೇ ಗೆದ್ದಿತ್ತು.
ಭಾರೀ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಪಾಟ್ನಾ ತಂಡವೇನೂ ಸುಲಭವಾಗಿ ಜಯ ಸಾಧಿಸಲಿಲ್ಲ. ಗುಜರಾತ್ ತಂಡ ಬಾರಿ ಪೈಪೋಟಿ ನೀಡಿತ್ತು. ಅಂತಿಮ ಪಂದ್ಯದಲ್ಲಿ ಕನ್ನಡಿಗ ಸುಕೇಶ್ ಹೆಗ್ಡೆ ನಾಯಕತ್ವದ ಗುಜರಾತ್ ಫಾರ್ಚೂನ್ ಜೈಂಟ್ಸ್ ಪ್ರಬಲ ಹೋರಾಟ ನೀಡಿದರೂ ಕೊನೆಯ ಕ್ಷಣಗಳಲ್ಲಿ ತಾನೇ ಮಾಡಿದ ತಪ್ಪುಗಳಿಗೆ ಬಲಿಯಾಯಿತು. ಇದರೊಂದಿಗೆ ಆಡಿದ ಮೊದಲ ಕೂಟದಲ್ಲೇ ಪ್ರಶಸ್ತಿ ಗೆಲ್ಲುವ ಅದರ ಕನಸು ನುಚ್ಚು ನೂರಾಯಿತು.
ಆರಂಭಿಕ ಮುನ್ನಡೆ ಸಾಧಿಸಿದ್ದ ಗುಜರಾತ್
ಪಂದ್ಯದ ಎರಡನೇ ನಿಮಿಷದಲ್ಲಿ ಮೋನು ಗೋಯತ್ ಎರಡು ಅಂಕಗಳನ್ನು ಗಳಿಸುವ ಮೂಲಕ ಪಾಟ್ನಾ ಮುನ್ನಡೆ ಸಾಧಿಸುವಂತೆ ಮಾಡಿದರು. ಅದಾದ ಬಳಿಕ ಗುಜರಾತ್‌ನ ರಾಕೇಶ್ ನರ್ವಾಲ್ ಸೂಪರ್ ರೈಡ್ ಮಾಡಿದರು. ನಂತರ ಕನ್ನಡಿಗ ಸುಕೇಶ್ ಹೆಗ್ಡೆ ಎರಡು ಅಂಕಗಳನ್ನು ಪಡೆಯುವ ಮೂಲಕ ಪಾಟ್ನಾ ತಂಡವನ್ನು ಆಲೌಟ್ ಮಾಡಿದರು. ಆದಕೆ ಇದೇ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಗುಜರಾತ್ ವಿಫಲವಾಗಿ ಸ್ವಯಂಕೃತ ಅಪರಾಧದಿಂದಾಗಿ ಪಂದ್ಯವನ್ನು ಮತ್ತು ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos