ಕ್ರೀಡೆ

ಡೇವಿಸ್‌ ಕಪ್‌ ನಲ್ಲಿ ಗರಿಷ್ಠ ಡಬಲ್ಸ್ ಪಂದ್ಯ ಗೆದ್ದು, ವಿಶ್ವ ದಾಖಲೆ ಬರೆದ ಭಾರತದ ಲಿಯಾಂಡರ್ ಪೇಸ್!

Srinivasamurthy VN
ಟಿಯಾಂಜಿನ್: ಭಾರತದ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇವಿಸ್ ಕಪ್‌ನಲ್ಲಿ ಗರಿಷ್ಠ ಡಬಲ್ಸ್ ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಚೀನಾದ ಟಿಯಾಂಜಿನ್ ನಲ್ಲಿ ನಡೆಯುತ್ತಿರುವ ಡೇವಿಸ್ ಕಪ್ ನ ಏಷ್ಯಾ-ಒಶಿಯಾನಿಯಾ ಗುಂಪು-1ರ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಜೋಡಿ ಚೀನಾದ ಮೊ ಕ್ಸಿನ್ ಗಾಂಗ್ ಮತ್ತು ಜೆ ಝಾಂಗ್ ವಿರುದ್ಧ 5-7, 7-6, 7-6ರಲ್ಲಿ ಗೆಲುವು ಸಾಧಿಸಿದರು. ಆ ಮೂಲಕ ಡೇವಿಸ್ ಕಪ್ ಇತಿಹಾಸದಲ್ಲಿಯೇ ಡಬಲ್ಸ್ ವಿಭಾಗದಲ್ಲಿ ಅತೀ ಹೆತ್ತು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಲಿಯಾಂಡರ್ ಪೇಸ್ ಬರೆದರು. ಲಿಯಾಂಡರ್ ಪೇಸ್ ಗೆ ಇದು 43ನೇ ಜಯವಾಗಿದ್ದು, ಈ ಮೂಲಕ ಡೇವಿಸ್‌ಕಪ್ ಇತಿಹಾಸದಲ್ಲಿ ಓರ್ವ ಯಶಸ್ವಿ ಆಟಗಾರ ನಾಗಿ ಹೊರಹೊಮ್ಮಿದರು.
ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದ್ದ ಈ ಡಬಲ್ಸ್ ಪಂದ್ಯದಲ್ಲಿ ರೋಹನ್ ಜೊತೆಗೂಡಿ ಆಡಿದ 44ರ ಹರೆಯದ ಪೇಸ್ ಚೀನಾದ ಮೊ ಕ್ಸಿನ್ ಗಾಂಗ್ ಹಾಗೂ ಝೀ ಝಾಂಗ್‌ರನ್ನು 5-7, 7-6(5),7-6(5) ಸೆಟ್‌ಗಳ ಅಂತರದಿಂದ ಸೋಲಿಸಿದರು. ಚೀನಾ ವಿರುದ್ಧ ಶುಕ್ರವಾರ ನಡೆದ ಮೊದಲೆರಡು ಸಿಂಗಲ್ಸ್ ಪಂದ್ಯಗಳಲ್ಲಿ ರಾಮ್‌ಕುಮಾರ್ ಹಾಗೂ ಸುಮಿತ್ ನಗಾಲ್ ಸೋತಿದ್ದರು. ಹೀಗಾಗಿ ಭಾರತ 0-2 ಹಿನ್ನಡೆಯಲ್ಲಿತ್ತು. ಪೇಸ್-ಬೋಪಣ್ಣ ಗೆಲುವಿನೊಂದಿಗೆ ಭಾರತ ಮರು ಹೋರಾಟ ನೀಡುವಂತಾಗಿದೆ. ರಾಮ್‌ ಕುಮಾರ್ ಹಾಗೂ ಸುಮಿತ್ ರಿವರ್ಸ್ ಸಿಂಗಲ್ಸ್ ಪಂದ್ಯಗಳನ್ನು ಜಯಿಸಿದರೆ ಭಾರತ ವಿಶ್ವ ಗ್ರೂಪ್ ಪ್ಲೇ-ಆಫ್‌ಗೆ ತೇರ್ಗಡೆಯಾಗುವ ಸಾಧ್ಯತೆ ಇದೆ.
ಕಳೆದ ಕೆಲವು ವರ್ಷಗಳಿಂದ ಭಾರತದ ಡೇವಿಸ್‌ಕಪ್ ಹೀರೋ ಆಗಿರುವ ಪೇಸ್ ಡಬಲ್ಸ್‌ನಲ್ಲಿ 42 ಪಂದ್ಯಗಳಲ್ಲಿ ಜಯ ಸಾಧಿಸಿ ಇಟಲಿಯ ಖ್ಯಾತ ಟೆನಿಸ್ ಆಟಗಾರ ನಿಕೊಲಾ ಪೀಟ್ರಂಜಲಿ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಕೊನೆಗೂ ನಿಕೊಲಾ ದಾಖಲೆಯನ್ನು ಮುರಿದ ಪೇಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 1990ರಲ್ಲಿ ಡೇವಿಸ್‌ಕಪ್‌ನಲ್ಲಿ ಝೀಶನ್ ಅಲಿ ಅವರೊಂದಿಗೆ ಚೊಚ್ಚಲ ಡಬಲ್ಸ್ ಪಂದ್ಯ ಆಡಿದ್ದ ಪೇಸ್ ಅವರು ಮಹೇಶ್ ಭೂಪತಿ ಜೊತೆಗೂಡಿ ಟೆನಿಸ್ ದಂತಕತೆಯಾಗಿ ಬೆಳೆದಿದ್ದರು.  ಪೇಸ್ ಹಾಗೂ ಭೂಪತಿ 90ರ ದಶಕದಲ್ಲಿ ಎಟಿಪಿ ಟೂರ್ನಿಗಳಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಭಾರತದ ಓರ್ವ ಯಶಸ್ವಿ ಡಬಲ್ಸ್ ಜೋಡಿಯಾಗಿದ್ದ ಪೇಸ್-ಭೂಪತಿ 24 ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದರು.
SCROLL FOR NEXT