ಕ್ರೀಡೆ

ಕಾಮನ್ ವೆಲ್ತ್ ಕ್ರೀಡಾಕೂಟ: ಶೂಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ; ಶ್ರೇಯಸಿ ಸಿಂಗ್ ಸಾಧನೆ

Srinivasamurthy VN
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು, ಬುಧವಾರ ಮಹಿಳೆಯರ ಡಬಲ್ ಟ್ರಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶ್ರೇಯಸಿ ಸಿಂಗ್ ಅಗ್ರ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಬೆಲ್ಮಾಟ್ ಶೂಟಿಂಗ್ ಸೆಂಟರ್ ನಲ್ಲಿ ಇಂದು ನಡೆದ ಡಬಲ್ ಟ್ರಾಪ್ ಶೂಟಿಂಗ್ ನ ಅಂತಿಮ ಸ್ಪರ್ಧೆಯಲ್ಲಿ ಭಾರತದ ಶ್ರೇಯಸಿ ಸಿಂಗ್ ಒಟ್ಟು 96 ಅಂಕಗಳನ್ನು ಸಂಪಾದಿಸುವ ಮೂಲಕ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕ ಗಳಿಸಿದರು. ಶ್ರೇಯಸಿ ತೀವ್ರ ಪೈಪೋಟಿ ನೀಡಿದ ಆಸ್ಟ್ರೇಲಿಯಾದ ಎಮ್ಮಾ ಕಾಕ್ಸ್ ಅಂತಿಮ ಹಂತದಲ್ಲಿ ಒಂದು ಗುಂಡಿಗೆ ಎರಡುಗುರಿಗಳನ್ನು ಛೇದಿಸಿದರಾದರೂ, ಅಗ್ರ ಸ್ಥಾನಕ್ಕೇರುವಲ್ಲಿ ವಿಫಲರಾದರು.
ಹಾಗಾಗಿ ಎಮ್ಮಾ ಕಾಕ್ಸ್ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಇನ್ನು ಕಂಚಿನ ಪದಕ ಸ್ಟಾಟ್ಲೆಂಡ್ ಪಾಲಾಗಿದ್ದು, ಲಿಂಡಾ ಪಿಯರ್ ಸನ್ 87 ಅಂಕಗಳಿಸಿ ಕಂಚಿನ ಪದಕ ಗಳಿಸಿದರು. ಇನ್ನು ಕೂದಲೆಳೆ ಅಂತರದಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ವರ್ಷಾ ಪದಕ ವಂಚಿತರಾಗಿದ್ದು, ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. 
ನಾಲ್ಕು ವರ್ಷಗಳ ಹಿಂದೆಯೇ ಇದೇ ಶ್ರೇಯಸಿ ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.
SCROLL FOR NEXT