ಕ್ರೀಡೆ

ಆಸ್ಟ್ರೇಲಿಯನ್ ಓಪನ್: ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಕ್ಯಾರೋಲಿನ್ ವೊಜ್ನಿಯಾಕಿ

Raghavendra Adiga
ಮೆಲ್ಬೋರ್ನ್: ಹಾಲೆಂಡಿನ ಟೆನಿಸ್ ತಾರೆ ಕ್ಯಾರೋಲಿನ್ ವೊಜ್ನಿಯಾಕಿ ಇಂದು ನೂತನ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಪಂದ್ಯಾವಳಿಯಲ್ಲಿ ರೊಮೇನಿಯಾದ ಅಗ್ರ ಶ್ರೇಯಾಂಕಿತ  ಆಟಗಾರ್ತಿ ಸಿಮೋನಾ ಹಾಲೆಪ್ ಅವರನ್ನು ಮಣಿಸಿ ಪ್ರಶಸ್ತಿ  ಮುಡಿಗೇರಿಸಿಕೊಂಡಿದ್ದಾರೆ.
ಶನಿವಾರ ನಡೆದ ಅಂತಿಮ ಹಣಾಹಣಿಯಲ್ಲಿ ಕ್ಯಾರೋಲಿನ್ 7-6 (7-2), 3-6, 6-4 ಸೆಟ್ ಗಳಿಂದ ಹಾಲೆಪ್ ಅವರನ್ನು ಪರಾಭವಗೊಳಿಸಿದ್ದು ಇದಕ್ಕಾಗಿ ಅವರು ಒಟ್ಟು ಎರಡು ಗಂಟೆ 50 ನಿಮಿಷಗಳನ್ನು ತೆಗೆದುಕೊಂಡರು.
"ನಾನು ಈ ಕ್ಷಣಾಕ್ಕಾಗಿ ಹಲವು ವರ್ಷಗಳ ಕಾಲ ಕನಸು ಕಾಣುತ್ತಿದ್ದೆ, ಈಗ ನನ್ನ ಕನಸು ನನಸಾಗಿದೆ. ನಾನು ಇಂದು ಗೆದ್ದಿರುವುದು ನಿಜ, ಭವಿಷ್ಯದಲ್ಲಿ ನಾನು ಇನ್ನೂ ಅನೇಕ ಸವಾಲುಗಳನ್ನು ಎದುರಿಸುವವಳಿದ್ದೇನೆ. ಇದೊಂದು ಅದ್ಭುತ ಪಂದ್ಯ, ನಂಬಲಾಗದ ಹೋರಾಟದಲ್ಲಿ ನನಗೆ ಜಯ ಲಭಿಸಿದೆ" ಕ್ಯಾರೋಲಿನ್ ಹೇಳಿದರು.
ಕ್ಯಾರೋಲಿನ್ ಪಾಲಿಗೆ ಇದು ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯಾಗಿದ್ದು ಇದಕ್ಕಾಗಿ ಅವರು 42 ಬಾರಿ ಪ್ರಯತ್ನ ನಡೆಸಿದ್ದರು. ಡ್ಯಾನಿಷ್ ಆಟಗಾರ್ತಿಯು ಈ ಪ್ರಶಸ್ತಿಯೊಡನೆ ಇದುವರೆಗೆ ರೊಮೆನಿಯಾದ ಹಾಲೆಪ್ ರಿಂದ ಅಗ್ರ ಪಟ್ಟವನ್ನು ಸಹ ಪಡೆದುಕೊಳ್ಳಲಿದ್ದಾರೆ. 
ಇದಲ್ಲದೆ ಕ್ಯಾರೋಲಿನ್ ವೊಜ್ನಿಯಾಕಿ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಜಯಿಸುವುದರೊಡನೆ ಈ ಸಾಧನೆ ಮಾಡಿದ ಹಾಲೆಂಡಿನ ಪ್ರಥಮ ಆಟಗಾರ್ತಿ ಎನ್ನುವ ಹಿರಿಮೆಗೆ ಭಾಜನರಾಗಿದ್ದಾರೆ. ವೊಜ್ನಿಯಾಕಿ ಅವರು ಈ ಮುನ್ನ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಎರಡು ಬಾರಿ (2009, 2014) ರನ್ನರ್ ಅಪ್ ಆಗಿದ್ದರು.
SCROLL FOR NEXT