ಕ್ರೀಡೆ

ಇಂಡೋನೇಷ್ಯಾ ಓಪನ್: ಹುಟ್ಟು ಹಬ್ಬದಂದು ಗೆಲುವಿನ ಸಿಹಿ, ಕ್ವಾರ್ಟರ್ ಫೈನಲ್ಸ್ ತಲುಪಿದ ಸಿಂಧೂ, ಸೈನಾಗೆ ಸೋಲು

Raghavendra Adiga
ಜಕಾರ್ತ(ಇಂಡೋನೇಷಿಯಾ): ಪ್ರತಿಷ್ಠಿತ ಇಂಡೋನೇಷ್ಯಾ ಬಿಎಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 1000 ಟೂರ್ನಮೆಂಟ್‌ ನಲ್ಲಿ ಭಾರತದ ಅಗ್ರ ಬ್ಯಾಡ್ಮಿಂತನ್ ಆಟಗಾರ್ತಿ ಪಿವಿ ಸಿಂಧೂ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
ಇಂದು ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ಸಿಂಧೂ ವಿಶ್ವ ನಂ.17ನೇ ರ‍್ಯಾಂಕ್‌ನ ಜಪಾನ್‌ನ ಅಯ ಓಹೊರಿ ವಿರುದ್ಧ 21-17, 21-14 ರ ಅಂತರದಲ್ಲಿ ಮಣಿಸುವ ಮೂಲಕ ಎಂಟರ ಘಟ್ಟ ತಲುಪಿದ್ದಾರೆ.
ಸಿಂಧೂ ಹಾಗೂ ಓಹೊರಿ ಕೇವಲ 36 ನಿಮಿಷದ ಹೋರಾಟ ನಡೆದಿದ್ದು ಸಿಂಧೂ ಅವರ ಆಟದ ಮೇಲಿನ ಬಿಗಿ ಹಿಡಿತದಿಂದ ಬಹು ಬೇಗನೆ ವಿಜಯ ಸಾಧಿಸಲು ಸಾಧ್ಯವಾಗಿದೆ.
ಕಳೆದ ವಾರ ನಡೆದಿದ್ದ ಮಲೇಷಿಯಾ ಓಪನ್ ಟೂರ್ನಮೆಂಟ್ ನಲ್ಲಿ ಒಲಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಸಿಂಧೂ ಸೆಮಿ ಫೈನಲ್ಸ್ ಹಂತದಲ್ಲಿ ಪರಾಜಿತರಾಗಿ ಸರಣಿಯಿಂದ ಹೊರ ನಡೆದಿದ್ದರು.
ಇದೇ ಸರಣಿಯ  ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪ್ರಣಯ್​ ಚೈನೀಸ್​ ತೈಪೆಯ ವಾಂಗ್ ಟ್ಸು ವೈ ಅವರ ವಿರುದ್ಧ 21-23, 21-15, 21-13 ಗೇಮ್​ಗಳ ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಸ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಸೈನಾ ಪರಾಭವ
ಇಂದು ನಡೆದ ಇಂಡೋನೇಷ್ಯಾ ಓಪನ್ ನ ಇನ್ನೊಂದು ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಎರಡನೇ ಸುತ್ತಿನ ಪಂದ್ಯದಲ್ಲಿಯೇ ಸೋತು ನಿರ್ಗಮಿಸಿದ್ದಾರೆ.
ಚೆನ್ ಯೂಫಿ ವಿರುದ್ಧ 18-21, 15-21 ಅಂತರದಲ್ಲಿ ಸೈನಾ ನೆಹ್ವಾಲ್ ಪರಾಭವಗೊಳ್ಳುವ ಮೂಲಕ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿದ್ದಾರೆ.
SCROLL FOR NEXT