ಪಿವಿ ಸಿಂಧೂ (ಸಂಗ್ರಹ ಚಿತ್ರ)
ಬರ್ಮಿಂಗ್ ಹ್ಯಾಮ್: ಭಾರತದ ಖ್ಯಾತ ಶಟ್ಲರ್ ಪಿವಿ ಸಿಂಧೂ ಆಲ್ ಇಂಗ್ಲೆಂಡ್ ಓಪನ್ 2018 ಟೂರ್ನಿಯ ಸೆಮಿ ಫೈನಲ್ ಪ್ರವೇಶ ಮಾಡಿದ್ದಾರೆ.
ಬರ್ಮಿಂಗ್ ಹ್ಯಾಮ್ ನಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಪಿವಿ ಸಿಂಧೂ ಅವರು ಏಳನೇ ಶ್ರೇಯಾಂಕಿತ ಆಟಗಾರ್ತಿ ಜಪಾನ್ ನ ನೊಝುಮಿ ಓಕುಹಾರ ವಿರುದ್ಧ 20-22, 21-18, 21-18ರ ಅಂತರದಲ್ಲಿ ಗೆಲುವು ದಾಖಲಿಸಿದರು. ಆ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಪಿವಿ ಸಿಂಧೂ ಪ್ರವೇಶ ಪಡೆದಿದ್ದಾರೆ.
ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಈ ಪಂದ್ಯದಲ್ಲಿ ಪಿವಿ ಸಿಂಧೂ ಅವರಿಗೆ ಜಪಾನ್ ಆಟಗಾರ್ತಿ ಕಠಿಣ ಹೋರಾಟ ನೀಡಿದರು. ಸಿಂಧೂ ಹಾಗೂ ಓಕುಹಾರ ನಡುವಣ ಹೋರಾಟ 84 ನಿಮಿಷಗಳ ವರೆಗೂ ಸಾಗಿತ್ತು. ಮೊದಲ ಸುತ್ತಿನಲ್ಲಿ 20-22ರ ಅಂತರದಲ್ಲಿ ಮುಗ್ಗರಿಸಿದ ಸಿಂಧೂ ಅದರಿಂದ ಶೀಘ್ರ ತಮ್ಮ ತಪ್ಪನ್ನು ತಿದ್ದಿಕೊಂಡರು. ಅಲ್ಲದೆ ದ್ವಿತೀಯ ಸೆಟ್ ಅನ್ನು 21-18ರ ಅಂತರದಲ್ಲಿ ವಶಪಡಿಸಿಕೊಂಡರು. ಅಂತಿಮ ಸೆಟ್‌ನ ಒಂದು ಹಂತದಲ್ಲಿ 16-12ರ ಅಂತರದ ಹಿನ್ನಡೆ ಅನುಭವಿಸಿದ ಸಿಂಧೂ ಸೋಲು ಕಾಣುವ ಭೀತಿ ಎದುರಾಗಿತ್ತು. ಆದರೆ ಛಲ ಬಿಡದ ಸಿಂಧೂ ಮತ್ತೆ ತಿರುಗಿ ಬಿದ್ದರು. ಅಲ್ಲದೆ ಕೆಲವೇ ಕ್ಷಣಗಳಲ್ಲಿ ಸಮಬಲ ಸಾಧಿಸಿ ಎದುರಾಳಿಯ ಮೇಲೆ ಸವಾರಿ ಮಾಡಿಯೇ ಬಿಟ್ಟರು. ಈ ಮೂಲಕ ಅಂತಿಮ ಸೆಟ್ ಕೂಡಾ 21-18ರ ಅಂತರದಲ್ಲಿ ಗೆಲ್ಲುವ ಮೂಲಕ ಪಂದ್ಯವನ್ನು ಸಿಂಧೂ ವಶಪಡಿಸಿಕೊಂಡರು.