ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್ 2018: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಭಾರತದ ಧ್ವಜ ಹಿಡಿಯುವ ಗೌರವ

Srinivasamurthy VN
ನವದೆಹಲಿ: 2018ನೇ ಸಾಲಿನ ಕಾಮನ್ ವೆಲ್ತ್ ಗೇಮ್ಸ್  ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಅಥ್ಲೀಟ್ ಗಳ ಪಥ ಸಂಚಲನದಲ್ಲಿ ಭಾರತದ ಧ್ವಜ ಹಿಡಿಯುವ ಗೌರವಕ್ಕೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಪಾತ್ರರಾಗಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿರುವಂತೆ ಪ್ರಸಕ್ತ ಸಾಲಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಧ್ವಜ ಹಿಡಿಯುವ ಗೌರವಕ್ಕೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಇಂದು ನಡೆದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಭಾರತ ತಂಡದಲ್ಲಿ ಒಲಿಂಪಿಕ್ಸ್ ಪದಕ ವಿಜೇತರಾದ ಮೇರಿಕೋಮ್, ಸೈನಾ ನೆಹ್ವಾಲ್ ರಂತಹ ಹಿರಿಯ ಆಟಗಾರರು ಇದ್ದರೂ, ಪಿವಿ ಸಿಂಧು ಅವರನ್ನು ಧ್ವಜ ಹಿಡಿಯುವ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಮೇರಿಕೋಮ್ ಮತ್ತು ಸೈನಾ ನೆಹ್ವಾಲ್ ಅವರಿಗೆ ಇದು 2ನೇ ಕಾಮನ್ ವೆಲ್ತ್ ಕ್ರೀಡಾಕೂಟವಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಐಒಎ ಅಧಿಕಾರಿಯೊಬ್ಬರು, ಇತ್ತೀಚಿನ ಟೂರ್ನಿಗಳಲ್ಲಿ ಪಿವಿ ಸಿಂಧು ಅವರ ಅದ್ಬುತ ಪ್ರದರ್ಶನ ಗಮನಿಸಿ ಅವರಿಗೆ ಈ ಗೌರವ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದೇ ಏಪ್ರಿಲ್ 4ರಂದು ಕ್ವೀನ್ಸ್ ಲ್ಯಾಂಡ್ ನ ಗೋಲ್ಡ್ ಕೋಸ್ಟ್ ನ ಕರ್ರಾರಾ ಸ್ಟೇಡಿಯಂನಲ್ಲಿ 2018ನೇ ಸಾಲಿನ ಕಾಮನ್ ವೆಲ್ತ್ ಗೇಮ್ಸ್ ಆರಂಭವಾಗಲಿದ್ದು, ಈ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಪಿವಿ ಸಿಂಧು ನೇತೃತ್ವದಲ್ಲಿ ಭಾರತೀ. ಅಥ್ಲೀಟ್ ಗಳ ತಂಡ ಸ್ಟೇಡಿಯಂನಲ್ಲಿ ಪಥ ಸಂಚಲನ ನಡೆಸಲಿದೆ. ತಂಡದ ಸಾರಥಿಯಾಗುವ ಪಿವಿ ಸಿಂಧು ಭಾರತದ ಧ್ವಜವನ್ನು ಹಿಡಿದು ಮುಂದೆ ಸಾಗುವ ಮೂಲಕ ಪ್ರೇಕ್ಷಕರಿಗೆ ಭಾರತದ ಒಲಿಂಪಿಕ್ಸ್ ತಂಡವನ್ನು ಪರಿಚಯ ಮಾಡಿಕೊಡಲಿದ್ದಾರೆ.
SCROLL FOR NEXT