ಪ್ರಶಸ್ತಿ ಕೈತಪ್ಪಿದ ಹಿನ್ನೆಲೆ ಕ್ರೀಡಾ ಸಚಿವರನ್ನು ಭೇಟಿ ಮಾಡಿದ ಭಜರಂಗ್ ಪುನಿಯಾ
ನವದೆಹಲಿ: ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ತಮ್ಮ ಹೆಸರು ತಪ್ಪಿಹೋಗಿರುವ ಹಿನ್ನೆಲೆಯಲ್ಲಿ ಭಾರತದ ಕುಸ್ತಿಪಟು ಭಜರಂಹ್ ಪುನಿಯಾ, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಭೇಟಿ ಮಾಡಿದ್ದಾರೆ.
"ನಾನು ಸಚಿವರನ್ನು ಸೆ.21 ರಂದು ಸಂಜೆ ಭೇಟಿ ಮಾಡಬೇಕಿತ್ತು. ಆದರೆ ಹಿಂದಿನ ದಿನ ಸಂಜೆ ಕರೆ ಬಂದಿತ್ತು. ಖೇಲ್ ರತ್ನಕ್ಕೆ ನನ್ನ ಹೆಸರನ್ನು ಪರಿಗಣಿಸದೇ ಇರುವುದಕ್ಕೆ ಸಂಬಂಧಿಸಿದಂತೆ ನಾನು ಸಚಿವರ ಬಳಿ ಪ್ರಶ್ನಿಸಿದ್ದೇನೆ, ಸಚಿವರು ಈ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಖೇಲ್ ರತ್ನಗೆ ನಾಮನಿರ್ದೇಶನಗೊಂಡಿದ್ದ ಕ್ರೀಡಾಪಟುಗಳಾದ ವಿರಾಟ್ ಕೊಹ್ಲಿ ಹಾಗೂ ಮೀರಾಬಾಯ್ ಚನು ಅವರಿಗಿಂತ ಎರಡೂ ಅಂಕಗಳನ್ನು ಹೆಚ್ಚು ಪಡೆದಿದ್ದರೂ ನನ್ನ ಹೆಸರನ್ನು ಪರಿಗಣಿಸಲಾಗಿರಲಿಲ್ಲ ಎಂದು ಭಜರಂಗ್ ಪುನಿಯಾ ಹೇಳಿದ್ದಾರೆ.
ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ 24 ವರ್ಷದ ಕುಸ್ತಿಪಟು ಚಿನ್ನದ ಪದಕಗಳನ್ನು ಗೆದ್ದಿದ್ದು, ಕ್ರೀಡಾ ಸಚಿವಾಲಯದಿಂದ ತ್ವರಿತ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ನ್ಯಾಯಾಂಗದ ಮೊರೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.